ಲೈಫ್ ಇಸ್ ಜಿಂಗಲಾಲ, ಈ ಪದಗಳನ್ನು ಕೇಳುತ್ತಿದ್ದಂತೆಯೇ ಮೊಗದಲ್ಲೊಂದು ಆಯಾಚಿತ ಮಂದಹಾಸ ಮಿನುಗುತ್ತದೆ ಅಲ್ಲವೇ ? ಎಕ್ಸಾಕ್ಟ್ಲಿ ನೀವು ಈ ಪುಸ್ತಕ ಓದಿ ಮುಗಿಸಿದಾಗಲೂ ಅಂತಹದ್ದೇ ಒಂದು ಹಾಸ ಮತ್ತು ನಮ್ಮನ್ನು ಓರೆಗೆ ಹಚ್ಚಿಕೊಳ್ಳುವ ಒಂದಷ್ಟು ಚಿಂತನಮಂಥನಗಳು ಮನದೊಳಗೆ ಮೂಡಿ ನಿಲ್ಲುತ್ತವೆ. ನನ್ನ ಪ್ರಕಾರ ಪುಸ್ತಕಗಳು ಎಂದರೆ, ಸಮಾಜದ ಓರೆಕೋರೆಗಳನ್ನು, ಜೊತೆಗೆ ನಮ್ಮೊಳಗಿನ ಊನಗಳನ್ನು ನಮ್ಮೆದುರಿಗೆ ನಿಲ್ಲಿಸಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುವ, ಸರಿಯಾದ ಹಾದಿಯಲ್ಲಿ ನಡೆಯಲು ಪ್ರೆರೇಪಿಸುವ, ಸೋತು ಕೂತಾಗ ಉತ್ಸಾಹ ತುಂಬಿ ಮುನ್ನಡೆಸುವ ಗುರು. ಅದು ಅಕ್ಷರಗಳಿಗಿರುವ ತಾಕತ್ತು.
ಅಂತಹದ್ದೇ ಗುರುವಾಗಿ ನಿಲ್ಲುವಂತ, ಪ್ರೇರಣೆ ತುಂಬುವಂತ, ನಮ್ಮ ಜೀವನ ಶೈಲಿಯನ್ನು ಅವಲೋಕಿಸಿಕೊಳ್ಳುವಂತ, ಅಳವಡಿಸಿಕೊಂಡರೆ ಬದುಕನ್ನೇ ಬದಲಿಸುವಂತ, ಮನವನ್ನ ಒಂದು ಪ್ರೌಢಿಮೆಗೆ ಒಯ್ಯುವಂತ ಅನೇಕ ವಿಚಾರ ಧಾರೆಗಳ ಸಂಗಮವನ್ನೆ ಈ ಒಂದು ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ನಮ್ಮ ಲೇಖಕರು. ಬದುಕಿನ ಹಾದಿಯಲ್ಲಿ ಬರಬಹುದಾದ ಏಳುಬೀಳುಗಳು, ಅವುಗಳನ್ನು ಹೇಗೆ ಮೀರಿ ನಿಲ್ಲಬಹುದು, ಇರುವುದರಲ್ಲಿಯೇ ಹೇಗೆ ಬದುಕನ್ನು ಇನ್ನಷ್ಟು ಸುಂದರಗೊಳಿಸಿಕೊಳ್ಳಬಹುದು ಎನ್ನುವುದಕ್ಕೆ ಸಲಹೆಗಳಿವೆ. ಸಾಧಕರ ಸ್ಫೂರ್ತಿಯ ಕಥೆಗಳಿವೆ. ಚೈತನ್ಯ ಉಕ್ಕಿಸುವ ಏಕಾಂತದ ಮಹತ್ವ, ಸಂಬಂಧಗಳ ಸರಪಳಿ ಭದ್ರವಾಗಿ ಜೋಡಿಸಿಕೊಳ್ಳಲು ಬೇಕಿರುವ ಕೊಂಡಿಗಳ ಸೂಕ್ಷ್ಮತೆಯ ಸಾರ, ಪ್ರಕೃತಿ, ಪ್ರೇಮ, ಸಂಗೀತ, ಧ್ಯಾನ, ಮೌನ ಎಲ್ಲದರ ಅಗತ್ಯತೆ ಜೀವನಕ್ಕೆಷ್ಟಿದೆ ಎನ್ನುವುದನ್ನು ತಮ್ಮ ವಿಭಿನ್ನ ಶೈಲಿಯ ಬರವಣಿಗೆಯಿಂದ ಓದುಗರ ಮನ ಮುಟ್ಟುವಂತೆ ಸರಳವಾಗಿ ಹೇಳಿದ್ದಾರೆ.
ಸೋಲಿನ ಕಮರಿನಿಂದ ಗೆಲುವಿನ ಲಯಕ್ಕೆ ನಮ್ಮನ್ನ ಕೊಂಡೊಯ್ಯುವ ಅಭ್ಯಾಸಗಳ ಮಹತ್ವವನ್ನು ತಮ್ಮದೇ ಜೀವನದ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಒಮ್ಮೆ ಪುಸ್ತಕವನ್ನು ಹಿಡಿದರೆ ತಂತಾನೆ ಓಡಿಸಿಕೊಂಡು ಹೋಗುವ ಒಂದು ಚೆಂದದ ಲಹರಿ ಈ ಹೊತ್ತಿಗೆಯೊಳಗಿದೆ ಎಂದು ಖಂಡಿತ ಹೇಳಬಹುದು. ಓದುವ ಹವ್ಯಾಸ ಎಷ್ಟು ಮುಖ್ಯ ಜೀವನಕ್ಕೆ ಎನ್ನುವುದನ್ನೂ ಹೇಳಿದ್ದಾರೆ. ಅದಕ್ಕಾದರೂ ಒಮ್ಮೆ ಓದಿ ನೋಡಿ..? ಬದುಕ ನೋಡುವ ದೃಷ್ಟಿಕೋನ ಬದಲಾದೀತು..! ಏಕೆಂದರೆ ನಮ್ಮ ಹವ್ಯಾಸಗಳೇ ನಮ್ಮ ಬದುಕನ್ನು ನಿರ್ಧರಿಸುವ ಮಾನದಂಡಗಳು..
✍️ ಪಲ್ಲವಿ ಚೆನ್ನಬಸಪ್ಪ