ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಸಂಬಂಧ ನಾವು ಈಗಾಗಲೇ ಮಸೂದ್ ಮತ್ತು ಪ್ರವೀಣ್ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಲು ಯತ್ನಿಸಿದೆವು. ಪತ್ರಿಕಾಗೋಷ್ಠಿ ಮುಗಿದು ಸುರತ್ಕಲ್‌ನಲ್ಲಿ ಫಾಜಿಲ್ ಮನೆಯವರನ್ನು ಭೇಟಿ ಆಗುತ್ತೇವೆ. ತನಿಖೆಯನ್ನು ಎನ್‌ಐಎ ಗೆ ವಹಿಸಿರುವುದು ಮುಖ್ಯಮಂತ್ರಿಗಳು ತಮ್ಮ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ ಎಂದು ಕಾಂಗ್ರೆಸ್ ನಾಯಕ‌ ಬಿ. ಕೆ. ಹರಿಪ್ರಸಾದ್ ಹೇಳಿದರು. 

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ 24 ಕೊಲೆಗಳಾದವು, ಅವೆಲ್ಲ ಕಾಂಗ್ರೆಸ್ ಕೊಲೆ ಎಂದು ಬಿಜೆಪಿ ಆಡಳಿತದಲ್ಲಿ ಕೊಲೆ ಅಧಿಕವಾಗಿದೆ. ಹಿಂದೆ ಒತ್ತಾಯ ಮಾಡಿ ಕೊಲೆ ತನಿಖೆ ಕೆಲವನ್ನು ಸಿಬಿಐಗೆ ಒಪ್ಪಿಸಿದ್ದರು. ಐದು ವರುಷವಾದರೂ ಫಲಿತಾಂಶ ಸೊನ್ನೆ. ಈಗಿನ ತನಿಖೆಯ ನಾಟಕ ಕೂಡ ನ್ಯಾಯ ವಿಳಂಬ ಮಾಡುವಂತೆ ಕಾಣುತ್ತದೆ ಎಂದು ಹರಿಪ್ರಸಾದ್ ಹೇಳಿದರು. ಅಭಿವೃದ್ಧಿಯಲ್ಲಿ ತೀರಾ ಕೆಳಗೆ ಇರುವ, ಕೊಲೆ ದರೋಡೆಗಳಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿ ಇರುವ ಉತ್ತರ ಪ್ರದೇಶದ ಮಾಡೆಲ್ ನಾಚಿಕೆಗೇಡು. ಬೊಮ್ಮಾಯಿಯವರು ನಾಚಿಕೆಗೆಟ್ಟು ಕೊಲೆಯಾದ ಒಬ್ಬರ ಮನೆಗೆ ಮಾತ್ರ ಹೋಗಿ ಪರಿಹಾರ ನೀಡಿ ತಾನು ಜನರ ಮುಖ್ಯಮಂತ್ರಿ ಅಲ್ಲ ಎಂದಿದ್ದಾರೆ. ರಾಜ್ಯಪಾಲರು ಈ ಸರಕಾರ ವಜಾ ಮಾಡಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯ ಮಾಡುವುದಾಗಿ ಹರಿಪ್ರಸಾದ್ ಹೇಳಿದರು.

ನೂಪುರ್ ಶರ್ಮಾ ಪ್ರಚೋದನೆಯಿಂದ ನಡೆದ ಕೊಲೆ ಆರೋಪಿಗಳನ್ನು ಕೂಡಲೆ ಹಿಡಿದರು. ಇಲ್ಲಿ ಏಕೆ ಆಗಲಿಲ್ಲ? ಬಿಜೆಪಿಯವರ ಆಡಳಿತದಲ್ಲಿ ಪೋಲೀಸರು ಕೂಡ ಅಸಹಾಯಕರಾಗಿದ್ದಾರೆ. ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಇದ್ದಾಗ ಬಿಜೆಪಿಯವರು ಮೆರವಣಿಗೆ ಮಾಡಿದರು. ಇವರಿಗೆ ಪ್ರತ್ಯೇಕ ಕಾನೂನು ಇದೆಯೇ ಎಂದು ಅವರು ಹೇಳಿದರು. ಹಿಂದುತ್ವ ಹತೋಟಿಗೆ ಸಂವಿಧಾನ ರಾಷ್ಟ್ರೀಯತೆಯೇ ಮದ್ದು. ಸರ್ವರಿಗೂ ಸಮಪಾಲು ಸಮಬಾಳು ಜಾರಿಗಾಗಿ ಕಾಂಗ್ರೆಸ್ ಹೋರಾಡುತ್ತದೆ. ಹಿಂದುತ್ವಕ್ಕೂ ಹಿಂದೂ ಧರ್ಮಕ್ಕೂ ಸಂಬಂಧ ಇಲ್ಲ ಎಂದು ಹರಿಪ್ರಸಾದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜೀ ಮಂತ್ರಿ ರಮಾನಾಥ ರೈ, ಕವಿತಾ ಸನಿಲ್, ಅಭಯಚಂದ್ರ ಜೈನ್, ಮಂಜುನಾಥ ಭಂಡಾರಿ, ನವೀನ್ ಡಿಸೋಜಾ, ಲುಕ್ಮಾನ್ ಬಂಟ್ವಾಳ, ಸಾಹುಲ್ ಹಮೀದ್, ಮೊಯ್ದಿನ್ ಬಾವಾ, ಹರೀಶ್ ಕುಮಾರ್, ರಕ್ಷಿತ್ ಶಿವರಾಂ, ಶಶಿಧರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.