ಮಂಗಳೂರು, ಜು. 12: "ತುಳಿಬಂಡಿ ದಾರಿಗಾಗಿ ಬಂದಿರುವ ಎಂಟು ಕೋಟಿ ರೂಪಾಯಿಗಳನ್ನು ಹೇಗಾದರೂ ವ್ಯಯಿಸಿ ಪಾಲು ಪಡೆಯಲು ಶಾಸಕರು ಕೆಲಸ ಆರಂಭಿಸಿದ್ದಾರೆಯೇ ಹೊರತು ನಿಜವಾದ ಕಾಳಜಿ ಸೈಕಲ್ ಪಥ ರಚನೆಯ ವಿಷಯದಲ್ಲಿ ಇಲ್ಲ" ಎಂದು ಮನಪಾ ಪ್ರತಿಪಕ್ಷ ನಾಯಕ ವಿನಯರಾಜ್ ಆಪಾದಿಸಿದರು.
ಅವರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಂಪು ಮಾರ್ಕ್ ಮಾಡುವುದರಿಂದ ಸೈಕಲ್ ಪಥ ಆಗುವುದಿಲ್ಲ. ಅದಕ್ಕೆ ಸರಿಯಾದ ಯೋಜನೆ ಬೇಕು ಎಂದರು.
"ರೈಲು ಜಾಗದಲ್ಲಿ ಸೈಕಲ್ ಪಥಕ್ಕೆ ಎರಡು ಕೋಟಿ ಪರಿಹಾರ ಕೊಟ್ಟು ಅನುಮತಿ ಪಡೆಯಬೇಕು, ಟ್ರಾಫಿಕ್ ಪೋಲೀಸರ ಅನುಮತಿ ಅಗತ್ಯ. ಯಾವುದನ್ನೂ ಮಾಡದೆ ಶಾಸಕ ವೇದವ್ಯಾಸ ಕಾಮತರು ಗುದ್ದಲಿ ಪೂಜೆ ಮಾಡಿದ್ದಾರೆ. ಈಗಿರುವ ರಸ್ತೆಯಲ್ಲಿಯೇ ಮೂರು ಮೀಟರ್ ಸೈಕಲ್ ಪಥ ಎಂದರೆ ವಾಹನ ಸವಾರರು, ದಾರಿಹೋಕರು ಎಲ್ಲಿ ಹೋಗಬೇಕು?"
"ರಾಘವೇಂದ್ರ ಮಠದ ರಸ್ತೆ, ಭಗವತಿ ದೇವಸ್ಥಾನದ ರಸ್ತೆ, ಇಲ್ಲೆಲ್ಲ ರಸ್ತೆ ಇರುವುದೇ ಹತ್ತಡಿ. ಅಲ್ಲಿ ಸೈಕಲ್ ಪಥ ಮಾಡುವುದಾಗಿ ತೋರಿಸಿದ್ದಾರೆ. ಶಾಸಕರು ಮತ್ತವರ ಕಾಂಟ್ರಾಕ್ಟರ್ ಕಾಸು ಹೊಡೆಯಲಿಕ್ಕಾ? ಮುಖ್ಯ ರಸ್ತೆ ಅಡ್ಡ ಹಾಯುವಲ್ಲಿ ಯಾವ ರಕ್ಷಣೆ ಇದೆ? ವೇದವ್ಯಾಸ ಕಾಮತ್‌ರು ಸ್ಮಾರ್ಟ್ ಸಿಟಿ ವಿಷಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಮನಪಾ ಅಭಿವೃದ್ಧಿ, ಸೈಕಲ್ ಪಥ, ಸ್ಮಾರ್ಟ್ ಸಿಟಿ ಕೆಲಸ ಎಲ್ಲವೂ ಅವೈಜ್ಞಾನಿಕವಾಗಿ ನಡೆದಿದೆ" ಎಂದು ವಿನಯರಾಜ್ ಆಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜೀ ಮೇಯರ್‌ಗಳಾದ ಮಹಾಬಲ ಮಾರ್ಲ, ಜೆಸಿಂತಾ ಆಲ್ಫ್ರೆಡ್, ಅನಿಲ್ ಕುಮಾರ್ ಪೂಜಾರಿ, ಹೊನ್ನಯ್ಯ, ಸಂಶುದ್ದೀನ್ ಮೊದಲಾದವರು ಇದ್ದರು.