ಉಜಿರೆ: ಡಿ. ವೀರೇಂದ್ರ ಹೆಗ್ಗಡೆಯವರು ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪನವರು ನಿಧನರಾದ ಸುದ್ಧಿ ತಿಳಿದು ವಿಷಾದ ವ್ಯಕ್ತಪಡಿಸಿದರು.
2025 ರ ಜುಲೈ 26 ರಂದು ಶನಿವಾರ ಬೆಂಗಳೂರಿನಲ್ಲಿ ವಿಶ್ವೇಶ್ವರ ಭಟ್ ಅವರ ನೂರನೆ ಕೃತಿ ಬಿಡುಗಡೆ ಸಮಾರಂಭದಲ್ಲಿ ನಾವು ಜೊತೆಯಾಗಿ ಭಾಗವಹಿಸಿದ್ದು ಆತ್ಮೀಯವಾಗಿ ಮಾತನಾಡಿದ್ದೆವು ಎಂದು ಅವರು ಹೇಳಿದರು. ಅದು ಅವರ ಕೊನೆಯ ಭೇಟಿಯಾಗಿತ್ತು ಎಂದರು.
ನೇರ ನಡೆ-ನುಡಿಯ ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ಕನ್ನಡ ನಾಡು-ನುಡಿ, ಸಂಸ್ಕೃತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಅನೇಕ ಕಾದಂಬರಿಗಳು ಹಾಗೂ ಸಾಹಿತ್ಯ ಕೃತಿಗಳು ಹಲವು ಬಾರಿ ಮರು ಮುದ್ರಣಗೊಂಡಿರುವುದಲ್ಲದೆ ಇತರ ಭಾಷೆಗಳಿಗೂ ಭಾಷಾಂತರಗೊಂಡಿವೆ. ಅವರ ಹೆಚ್ಚಿನ ಕೃತಿಗಳನ್ನು ನಾನು ಆಸಕ್ತಿಯಿಂದ ಓದಿದ್ದೇನೆ.
1981 ರ ನವೆಂಬರ್ 26 ರಂದು ಗುರುವಾರ ಲಕ್ಷದೀಪೋತ್ಸವ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು.
ಅವರ ಆತ್ಮಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು ಚಿರಶಾಂತಿಯನ್ನು ಕೋರಿದರು.