ಲೇಖನ ರಾಯಿ ರಾಜಕುಮಾರ


ಪುರಂದರದಾಸರು-ಹರಿ ಕರುಣವೇ ಅಂಗಿ, ಗುರು ಕರುಣವೇ ಮುಂಡಾಸು" ಎಂದು ಹಾಡಿರುತ್ತಾರೆ. ಅದರಂತೆ ತನ್ನ ಆತೃಪ್ತಿ ಕಟ್ಟೆ ಮೀರಿ ಸತ್ಯ ದರ್ಶಿನಿ ಆದ ವೈಶ್ಯ ಶ್ರೀಮಂತ ಶ್ರೀನಿವಾಸ ನಾಯಕರು ತನ್ನದೆಲ್ಲವನ್ನು ಭಗವಂತನ ಭಕ್ತರಿಗೆ ಹಂಚಿ, ತಾಳ ತಂಬೂರಿ ಯೊಂದಿಗೆ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಟು, ಸಂತ ಪುರಂದರ ದಾಸ ಎಂಬ ಬಿರುದನ್ನು ಪಡೆದು ಜಗತ್ ಪ್ರಖ್ಯಾತರಾದರು. ಆದರೆ ಇಂದಿನ ಕಲಿಯುಗದಲ್ಲಿ ಅಂತಹ ಅತೃಪ್ತಿಯನ್ನೇ ಹೊದ್ದು ಮಲಗಿರುವ ನೂರಾರು, ಸಾವಿರಾರು, ಲಕ್ಷಾಂತರ ಮಂದಿಯನ್ನು ನಾವು ಪ್ರತಿ ದಿನ ಎಂಬಂತೆ ಕೇಳಿ, ನೋಡಿ ಇರುತ್ತೇವೆ. 

ಮನುಷ್ಯನ ರಚನೆಯ ಸಂದರ್ಭದಲ್ಲಿ ಎಲ್ಲವನ್ನು ಧಾರೆಯೆರೆದ ಭಗವಂತ ಒಂದು ವಸ್ತುವನ್ನು ಮಾತ್ರ ಕೊಡದೆಯೇ ತನ್ನಲ್ಲಿಯೇ ಇರಿಸಿಕೊಂಡ ಎಂದು ಎಲ್ಲಾ ಮಹಾಮಹಿಮರು ತಿಳಿಸಿರುತ್ತಾರೆ. ಅದುವೇ ತೃಪ್ತಿ. ಆದುದರಿಂದಲೇ ಮಹಾಮಹಿಮರ ಉಕ್ತಿ ಹೇಳುವುದು-"ಅಷ್ಟು ಸಿಕ್ಕಿದರೆ ಮತ್ತಷ್ಟು ಬೇಕೆಂಬಾಸೆ, ಮತ್ತಷ್ಟು ಸಿಕ್ಕಿದರೆ ಮಗದಷ್ಟು ಬೇಕೆಂಬ ಆಸೆ." ಆದುದರಿಂದಲೇ ಭಗವಾನ್ ಬುದ್ಧ ಸಾರಿ ಸಾರಿ ಹೇಳಿದ್ದು-"ಆಸೆಯೇ ದುಃಖಕ್ಕೆ ಮೂಲ" ಎಂದು. ಹೀಗಾಗಿ ಋಷಿ, ಮುನಿ, ಮಹಾಪುರುಷ ತಪಸ್ವಿಗಳು ಸಂ-ನ್ಯಾಸಗೈದು, ಕೇವಲ ಕಮಂಡಲ ದೊಂದಿಗೆ ಕಾಡಿನಲ್ಲಿ ನಾಡಿನಿಂದ ದೂರದಲ್ಲಿ ಪರ್ಣಕುಟೀರದಲ್ಲಿ ಕಂದ ಮೂಲ ಫಲಗಳನ್ನು ಮಾತ್ರ ತಿಂದು ಸಂತೃಪ್ತಿಯಿಂದ ಬದುಕುವುದು. ಆಸೆಗಳಿಗೆ ಅಲ್ಲಿ ಪ್ರವೇಶವೇ ಇರುತ್ತಿರಲಿಲ್ಲ. 

ಲಂಚ, ಅಪರಾಧ ತನಿಖೆ, ವಿಚಾರಣೆ ಮತ್ತು ಭ್ರಷ್ಟಾಚಾರ ತಡೆಯ ಅಂಶಗಳಿಗೆ ಸಂಬಂಧಿಸಿದ ಕಾರ್ಯಗಳು ಭ್ರಷ್ಟಾಚಾರ ತಡೆ ಕಾಯಿದೆ 1988 ರ ನಿಬಂಧನೆಗಳ ಅಡಿ ಪ್ರಕರಣ ನೋಂದಾಯಿಸಲ್ಪಡುತ್ತದೆ. ದೇಶಿಯ ಮಟ್ಟದಲ್ಲಿ 1964 ರಲ್ಲಿ ರಚಿಸಲಾದ ಸೆಂಟ್ರಲ್, ವಿಜಿಲೆನ್ಸ್ ಕಮಿಷನ್ ನ ಕಾರ್ಯ ಫೆಬ್ರವರಿ 11ರಂದು ನಿಟ್ಟೂರು ಶ್ರೀನಿವಾಸರಾವ್ ಅವರ ವಿಜಿಲೆನ್ಸ್ ಆಯುಕ್ತರ ನೇಮಕದೊಂದಿಗೆ ಪ್ರಾರಂಭವಾಯಿತು. 

ರಾಜ್ಯ ಸರಕಾರವು ಭ್ರಷ್ಟಾಚಾರ ವಿರೋಧಿ ಬ್ಯೂರೋ ( ಎ ಸಿ ಬಿ) ಯನ್ನು , ಲೋಕಾಯುಕ್ತ ಇತ್ಯಾದಿ ಸಮಿತಿಗಳನ್ನು ರಚಿಸಿದ್ದಾಗ್ಯೂ ಕೇಂದ್ರ ಸರಕಾರ ಕೂಡ ಸಿಬಿಐ ಇತ್ಯಾದಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಭ್ರಷ್ಟಾಚಾರವನ್ನು ತಡೆಯಲು ಹಲವಾರು ಉಪಕ್ರಮಗಳನ್ನು ಕೈಗೊಂಡಿರುತ್ತದೆ. ಇಷ್ಟಾಗಿಯೂ ಎಲ್ಲವೂ ನೀರ ಮೇಲಣ ಗುಳ್ಳೆಯಂತೆ ಹಣ ಬಾಕರ ಎದುರು ಟುಸ್ಸೆಂದು ಸಾಬೀತಾಗಿದೆ. ಕೆಲವಾರು ಬಾರಿ ಮೇಲ್ಕಂಡ ಸಂಸ್ಥೆಗಳಲ್ಲಿರುವ ವ್ಯಕ್ತಿಗಳೇ ಈ ಜಾಗದಲ್ಲಿ ಸಿಕ್ಕಿಬಿದ್ದು ಕಂಬಿ ಎಣಿಸಿದ ಉದಾಹರಣೆಗಳು ಇವೆ. ಹೀಗಿದ್ದು ಅಲ್ಲೊಂದು, ಇಲ್ಲೊಂದು ಹಲವಾರು ಮಂದಿ ಪ್ರಾಮಾಣಿಕರಿಂದಾಗಿ ಭ್ರಷ್ಟರ ಕಾರ್ಯ ತಹಬಂದಿಗೆ ಬಂದಿದೆ. 

ಕಾನೂನು, ನಿಯಮಗಳು, ಎಂತಹವೇ ಇದ್ದರೂ ಕೂಡ ಕಾವಲು ಸಂಸ್ಥೆಗಳು ಎಷ್ಟೇ ಇದ್ದರೂ ಕೂಡ ಎಲ್ಲಾ ನಿಯಮ, ಕಾನೂನುಗಳನ್ನು ತಮಗೆ ಬೇಕಾದಂತೆ ತಿರುಚಲು ಹಾಗೂ ಸಾಮಾನ್ಯರನ್ನು ತಮಗೆ ಬೇಕಾದಂತೆ ಪೀಡಿಸಲು ತಿಳಿದಿರುವ ವ್ಯಕ್ತಿಗಳು, ಗುಮಾಸ್ತರುಗಳು, ಅಧಿಕಾರಿಗಳು ಇರುವ ತನಕ ಮತ್ತು ನಿಯಮ ರೀತಿಯ ಎಲ್ಲಾ ದಾಖಲೆಗಳನ್ನು ಹೊಂದಿದ್ದು ಕೂಡ ಕ್ರಮ ಪ್ರಕಾರ ದಾಖಲೆ ಪಡೆಯಲು ಕಾಯುವ ತಾಳ್ಮೆ ಇಲ್ಲದ ವ್ಯಕ್ತಿಗಳು ಇರುವ ತನಕ ಭ್ರಷ್ಟಾಚಾರವನ್ನು ತಡೆಗಟ್ಟಲು ಅಸಾಧ್ಯ. ಎಂದರೆ ತಾಳ್ಮೆ ರಹಿತ ವ್ಯಕ್ತಿಗಳು ಲಂಚದ ಹಣ ನೀಡಿ ತಕ್ಷಣವೇ ದಾಖಲೆಯನ್ನು ಪಡೆಯಲು ನಡೆಸುವ ಪ್ರಯತ್ನ ಕೆಲವು ಅಧಿಕಾರಿಗಳಿಗೆ, ಗುಮಾಸ್ತರುಗಳಿಗೆ ಭ್ರಷ್ಟಾಚಾರದ ರಹಧಾರಿಯಾಗಿ ಪರಿಣಮಿಸಿದೆ. 

ಸಾಮಾನ್ಯರು, ಸರಕಾರದ ಮಂದಿ ಯೋಗ್ಯ ರೀತಿಯಲ್ಲಿ, ನಿಯಮ ಬದ್ಧವಾಗಿ ಎಲ್ಲವನ್ನು ಮಾಡಿದರೆ ಯಾವುದೇ ವ್ಯಕ್ತಿ ಸೂಕ್ತ ದಾಖಲೆಗಳೊಂದಿಗೆ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಸ್ವೀಕೃತಿ ಪಡೆದು ಮೆಸೇಜ್ ಗಳ ಮೂಲಕ ತನ್ನ ಅಜ್ಜಿಯ ಬಗೆಗೆ ತಿಳಿಯಲು ಸಾಧ್ಯವಾದರೆ ಸಾಕಷ್ಟು ಭ್ರಷ್ಟಾಚಾರದ ರೂಪಗಳನ್ನು ತರಬಹುದು. ಬಹಳಷ್ಟು ಸಾರ್ವಜನಿಕ ಸೇವಾ ಸಂಸ್ಥೆಗಳಲ್ಲಿ ಸಾಮಾನ್ಯರು ನೀಡುವ ಅರ್ಜಿಗಳನ್ನು ಸೂಕ್ತವಾಗಿ ಏಕಗವಾಕ್ಷಿ ರೀತ್ಯಾ ಸ್ವೀಕರಿಸುವ ವ್ಯವಸ್ಥೆ, ಸ್ವೀಕರಿಸಿ ಸ್ವೀಕೃತಿ ನೀಡುವ ವ್ಯವಸ್ಥೆ ಇಲ್ಲದಿರುವುದು ಭ್ರಷ್ಟಾಚಾರಿಗಳಿಗೆ, ಮಧ್ಯವರ್ತಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಅನುಕೂಲಕರ ವಾಗಿದೆ. ಅಂಗಿ, ಮುಂಡಾಸುಗಳೆಲ್ಲವೂ ಸಮರ್ಪಕ ಆಗಿರಬೇಕಾದರೆ ಹರಿ, ಗುರುಗಳೆನ್ನುವ ಸರಕಾರ ಭೃಷ್ಟಾಚಾರಿ ವಿರೋಧಿಯಾಗಿರಬೇಕು.