
ಲೇಖನ ರಾಯಿ ರಾಜ ಕುಮಾರ
ಮಾರ್ಗಶಿರ ಹುಣ್ಣಿಮೆಯ ದಿನದಂದು ದತ್ತಾತ್ರೇಯರ ಜನ್ಮವಾಯಿತು ಎಂದು ಗುರು ಚರಿತ್ರೆಯ ಮೂಲಕ ತಿಳಿದು ಬರುತ್ತದೆ. ಸಾಮಾನ್ಯವಾಗಿ ದತ್ತಾತ್ರೇಯರ ಶಿಷ್ಯರು ಗುರು ಚರಿತ್ರೆಯ ಪಾರಾಯಣವನ್ನು ಆ ದಿನದಂದು ಮಾಡಿ ಕೃತಾರ್ಥತೆಯನ್ನು ಪಡೆಯುತ್ತಾರೆ.
ಭಗವಾನ್ ದತ್ತಾತ್ರೇಯ ಎಂದರೆ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳ ಸಂಯುಕ್ತ ರೂಪ. ಬ್ರಹ್ಮದೇವ ಜ್ಞಾನದ ಸ್ವರೂಪಿಯಾದರೆ, ವಿಷ್ಣು ವಾತ್ಸಲ್ಯ ಸ್ವರೂಪಿ, ಶಿವ ವೈರಾಗ್ಯ ಸ್ವರೂಪಿಯಾಗಿದ್ದಾನೆ. ಇಂತಹ ಸಂಗಮರೂಪಿ ದತ್ತಾತ್ರೇಯರಲ್ಲಿ ಜ್ಞಾನ, ವಾತ್ಸಲ್ಯ, ವೈರಾಗ್ಯದ ಸುಂದರ ಸಂಗಮವಿದೆ.



ವೈರಾಗ್ಯದಿಂದಾಗಿ ಸನ್ಯಾಸಿ ಜೀವನ ನಡೆಸುವ ದತ್ತಾತ್ರೇಯರು ಮೇರು ಶಿಖರದಲ್ಲಿ ವಾಸ್ತವ್ಯವಿದ್ದು ಸ್ಥಳದ ಮೋಹ ಬಂಧನ ವನ್ನು ಹೊಂದಿರುವುದಿಲ್ಲ. ಜೀವನ್ ಮುಕ್ತ ರಾಗಿರುವುದರಿಂದ ಸ್ವೇಚ್ಛಾ ವಿಹಾರಿಯಾಗಿದ್ದು ಪ್ರಸನ್ನ ಚಿತ್ತದಿಂದ ಭಕ್ತರನ್ನು ಆಶೀರ್ವದಿಸುತ್ತಾರೆ. ಸದ್ಗುರು ಆಗಿದ್ದರೂ, ಶಿಷ್ಯನಂತೆ ನಿರಂತರ ಕಲಿಯುತ್ತಿರುತ್ತಾರೆ. ಅದೇ ಸಂದರ್ಭದಲ್ಲಿ 24 ಗುರುಗಳು, 24 ಉಪ ಗುರುಗಳನ್ನು ಕೂಡ ಹೊಂದಿದ್ದಾರೆ. ಇದೇ ಇವರ ವಿಶೇಷತೆ.
ದತ್ತಾತ್ರೇಯರ ಅವತಾರಿ ಕಾರ್ಯದ ಪ್ರಸಿದ್ಧ ಕ್ಷೇತ್ರ ಗಿರ ನಾರ ಪರ್ವತ. ಗುಜರಾತ್ ನಲ್ಲಿರುವ ಈ ಸ್ಥಳ ತುಂಬಾ ಎತ್ತರದಲ್ಲಿದ್ದು 12 ಸಾವಿರ ವರ್ಷಗಳ ಕಾಲ ದತ್ತಾತ್ರೇಯರು ತಪಶ್ಚರ್ಯದಿಂದ ಪಾವನಗೊಳಿಸಿದ ಪುಣ್ಯ ತೀರ್ಥಕ್ಷೇತ್ರ. ಇದರ ಮೂಲ ಹೆಸರು ಗಿರಿ ನಾರಾಯಣ. ಇಲ್ಲಿಯ ಗೀರ್ ಹಸುಗಳು ಬಹಳ ಪ್ರಖ್ಯಾತ. ಶಿವ ಪುರಾಣದಲ್ಲಿ ಗಿರ್ ಪರ್ವತಕ್ಕೆ ರೇವತಾಂಚಲ ಪರ್ವತ ಎಂದು ಹೆಸರಿದೆ. ಶ್ವೇತಾ ಚಲ, ಶ್ವೇತಗಿರಿ ಎಂಬ ಹೆಸರುಗಳು ಕೇಳಿಬರುತ್ತದೆ. ಕಾರಣ ಇದು ಅತ್ಯಂತ ರಮಣೀಯ, ಮನೋಹರ, ಔಷಧೀಯ ವನಸ್ಪತಿಯ ಸಮೃದ್ಧ ಪ್ರದೇಶವಾಗಿದೆ.
ಗುಜರಾತ್ ನ ಇಂದಿನ ಜುನಾಗಢ ಅಥವಾ ಸೌರಾಷ್ಟ್ರ ದಿಂದ ತಲೇಠಿಗೆ 5 ಕಿಲೋಮೀಟರ್ ದೂರ ತೆರಳಬೇಕು. ಅಲ್ಲಿ ಭವನಾಥ, ಮಹಾದೇವ, ಲಂಬ ಹನುಮಾನ್ ದೇವಾಲಯಗಳು, ಮೃಗೀಕುಂಡ ಮುಂತಾದ ಪ್ರಾಚೀನ ಸ್ಥಳಗಳು ಇವೆ. ಅಲ್ಲಿಂದ ಗುರುಶಿಖರದವರೆಗೆ 10 ಸಾವಿರ ಮೆಟ್ಟಿಲುಗಳ ದೂರವನ್ನು ಹತ್ತಿ ತೆರಳ ಬೇಕಾಗುತ್ತದೆ. ಸುಮಾರು 2600 ಮೆಟ್ಟಿಲು ಹತ್ತಿದಾಗ ರಾಣಕ್ ದೇವಿ ಮಾತೆಯ ಶಿಲೆ ಇದ್ದು, ಎರಡು ಹಸ್ತದ ಗುರುತು ಕಂಡುಬರುತ್ತದೆ. ಸುಮಾರು 3500 ಮೆಟ್ಟಿಲು ಹತ್ತಿದಾಗ ಬಸೂತಿ ಬಾಯಿ ದೇವಿಯ ದೇವಾಲಯವಿದೆ. ಗೌಮುಖಿ ಗಂಗೆಯ ಬಲಭಾಗದಿಂದ ಪರ್ವತ ಏರಲು ಪ್ರಾರಂಭಿಸಿದರೆ ಸುಮಾರು 4,800 ಮೆಟ್ಟಿಲಲ್ಲಿ ಅಂಬಾದೇವಿಯ ಮಂದಿರ ಇದೆ. ದೇಶದ 51 ಶಕ್ತಿ ಪೀಠಗಳಲ್ಲಿ ಅಂಬಾದೇವಿಯ ಪೀಠವೂ ಒಂದು. ಸುಮಾರು 5,500 ಮೆಟ್ಟಿಲಲ್ಲಿ ಗೋ ರಕ್ಷನಾಥ ಮಂದಿರ ಇದೆ. ಇದು ಸಮುದ್ರ ಮಟ್ಟದಿಂದ ಸುಮಾರು 3,666 ಅಡಿಗಳ ಎತ್ತರದಲ್ಲಿದೆ. ಅಲ್ಲಿಂದ ಸ್ವಲ್ಪ ಮುಂದೆ ಎರಡು ದೊಡ್ಡ ಕಮಾನುಗಳಿದ್ದು ಬಲಬದಿಯ ಕಮಾನಿನಿಂದ ಸುಮಾರು 300 ಮೆಟ್ಟಿಲು ಇಳಿದರೆ ಕಮಂಡಲು ಸ್ಥಾನವಿದೆ. ಅಲ್ಲಿ ದತ್ತ ಮಹಾರಾಜರ ಕಾಲದಿಂದ ನಿರಂತರವಾಗಿ ಉರಿಯುತ್ತಿರುವ ಅಗ್ನಿ ಇದೆ. ಅದನ್ನು ಅಖಂಡ ಧುನಿ ಎಂದು ಕರೆಯುತ್ತಾರೆ. ಇದು ಕಳೆದ ಐದು ಸಾವಿರ ವರ್ಷಗಳಿಂದ ಸತತವಾಗಿ ಪ್ರತಿ ಸೋಮವಾರ ಮುಂಜಾನೆ ಒಂದು ಗಂಟೆಗಳ ಕಾಲ ಕನಿಸಿಕೊಳ್ಳುತ್ತದೆ. ಈಗಲೂ ಈ ಪ್ರಕಾರ ಕಾಣಿಸಿಕೊಳ್ಳುತ್ತಿದೆ ಎಂದು ಸಂದರ್ಶಕರು ತಿಳಿಸುತ್ತಾರೆ.
ಎಡಬದಿಯ ಕಮಾನಿನಿಂದ ಸುಮಾರು ಒಂದು ಸಾವಿರ ಮೆಟ್ಟಿಲು ಇಳಿದರೆ ಗುರುಶಿಖರ ಕಂಡುಬರುತ್ತದೆ. ಇದು ನೋಡುವುದಕ್ಕೆ ಉದ್ದವಾದ ಚೂಪಾದ ಆನೆಯ ದಂತದಂತೆ ಕಂಗೊಳಿಸುತ್ತದೆ. ಇಲ್ಲಿ ದತ್ತಾತ್ರೇಯ ಗುರುಗಳ ಚರಣ ಪಾದುಕೆಗಳು ಮೂಡಿವೆ. ಸುಮಾರು 12 ಸಾವಿರ ವರ್ಷಗಳ ಕಾಲ ಇಲ್ಲಿಯೇ ತಪಸ್ಸು ಮಾಡಿದ್ದಾರೆಂದು ಪ್ರತೀತಿ ಇದೆ.
ಕ್ರಿಸ್ತಪೂರ್ವ 1000 ವರ್ಷಗಳ ಹಿಂದೆ ರಾಜ ಕುಮಾರ ಪಾಲ ಎನ್ನುವರು ಗಿರ್ ನಾರದ ಮೇಲೆ ಹತ್ತುವುದಕ್ಕಾಗಿ, 10000 ಮೆಟ್ಟಿಲನ್ನು ನಿರ್ಮಿಸಿದ್ದನು. ಪ್ರತಿ ಹುಣ್ಣಿಮೆಯಂದು ಸಾವಿರಾರು ಭಕ್ತರು ಗುರು ಶಿಖರವನ್ನು ಏರಿ ದತ್ತಾತ್ರೇಯರ ದರ್ಶನವನ್ನು ಮಾಡುತ್ತಾರೆ. ಇತ್ತೀಚೆಗೆ ಸರಕಾರವೇ ರೋಪವೇ ಸೌಲಭ್ಯವನ್ನು ಒದಗಿಸಿದೆ. ವಯೋವೃದ್ಧರಿಗೆ ಅನುಕೂಲವಾಗಲು ಧೋಲಿ ವ್ಯವಸ್ಥೆಯನ್ನು ಕೂಡ ಇಲ್ಲಿ ಮಾಡಲಾಗಿದೆ. ಇರುವ ವಿವಿಧ ಗುಹೆಗಳಲ್ಲಿ ಹಲವಾರು ಸಿದ್ಧಯೋಗಿಗಳು ನೂರಾರು ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ತಿಳಿದು ಬರುತ್ತದೆ.
ದತ್ತಾತ್ರೇಯರ ಮೊದಲ ಅವತಾರ ಶ್ರೀಪಾದವಲ್ಲಭರು. ಅವರು ಆಂಧ್ರದ ಪೀಠಾಪುರದಲ್ಲಿ ಜನಿಸಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಭಾರತಾದ್ಯಂತ ಸಂಚರಿಸಿ ಕುರುವ ಪುರಕ್ಕೆ ಬಂದು ನೆಲೆಸಿದರು. ಅದೇ ಅವರ ತಪೋಭೂಮಿ ಆಗಿದೆ. ಪ್ರಸ್ತುತ ಇದು ರಾಯಚೂರಿನಲ್ಲಿ ಇದೆ. ರಾಯಚೂರಿನ ಕೃಷ್ಣಾ ನದಿ ಇಂದ ಸುತ್ತುವರಿದಿರುವ ಕುರುಗಡ್ಡಿ ದ್ವೀಪದ ಕಲ್ಲಿನ ಗುಹೆ, ಎದುರಿನ ಸುಮಾರು 900 ವರ್ಷಗಳ ಹಳೆಯ ದೊಡ್ಡ ಔದುಂಬರ ವೃಕ್ಷದ ಕೆಳಗೆ ಶ್ರೀಪಾದವಲ್ಲಭರು ಅನುಷ್ಠಾನ ಗೈಯುತ್ತಿದ್ದರು ಎಂದು ತಿಳಿದು ಬರುತ್ತದೆ. ಪ್ರಸ್ತುತ ಅಲ್ಲಿ ಶ್ರೀಪಾದರ ಮಂದಿರವಿದ್ದು ಬಳಿಯಲ್ಲಿಯೇ" ನಿರ್ಗುಣ ಪೀಠ ಪಾರ್" ಪಾದುಕೆಗಳು ಇವೆ.
ಕರ್ನಾಟಕದ ಗಾಣಗಾಪುರದಲ್ಲಿರುವ ದತ್ತಾತ್ರೇಯ ದೇವಾಲಯ ಕೃಷ್ಣ ಮತ್ತು ಅಮರ್ಜಾ ನದಿಗಳ ಸಂಗಮ ಸ್ಥಳದಲ್ಲಿದೆ. ಆಂಧ್ರ ಪ್ರದೇಶದ ಲಿಂಗಸಮುದ್ರಂ ನಲ್ಲಿ ದತ್ತಾತ್ರೇಯ ಸ್ವಾಮಿ ದೇವಸ್ಥಾನ, ನಲ್ಲೂರು ಜಿಲ್ಲೆಯ ದತ್ತಾತ್ರೇಯ ಸ್ವಾಮಿ ದೇವಾಲಯ, ದೆಹಲಿಯ ಪೂಸಾ ಕ್ಯಾಂಪಸ್ ನಲ್ಲಿರುವ ದತ್ತಾತ್ರೇಯ ಮಂದಿರ, ಗುಜರಾತ್ನ ಕಚ್ ನ ಕಲೋ ಡೂಂಗರ್ ನಲ್ಲಿರುವ ದತ್ತಾತ್ರೇಯ ಮಂದಿರ, ಧರ್ಮಸ್ಥಳದಲ್ಲಿರುವ ದತ್ತಾತ್ರೇಯ ಮಂದಿರ ಗಳು ಬಹಳ ಪ್ರಖ್ಯಾತವಾದ ಮಂದಿರಗಳಾಗಿವೆ. ಆ ಎಲ್ಲ ಪ್ರದೇಶಗಳಲ್ಲಿ ಮಾರ್ಗಶಿರ ಹುಣ್ಣಿಮೆಯೆಂದು ಜನಜಾತ್ರೆಯೇ ಸೇರುತ್ತದೆ.