ಉಜಿರೆ: ಪರಿಶುದ್ಧ ಮನ, ವಚನ, ಕಾಯದೊಂದಿಗೆ ನಿತ್ಯವೂ ಮಾಡುವ ದೇವರ ಭಕ್ತಿಗೆ ಅಪಾರ ಶಕ್ತಿ ಇದೆ. ನಿತ್ಯವೂ ಮನೆಯಲ್ಲಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ದೇವರ ಪ್ರಾರ್ಥನೆ, ಧ್ಯಾನ, ಭಜನೆ, ಪೂಜೆ ಮಾಡಿದರೆಎಲ್ಲಾ ಕಷ್ಟ-ನಷ್ಟಗಳು ಪರಿಹಾರವಾಗಿ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶನಿವಾರ ಶಿವರಾತ್ರಿ ಜಾಗರಣೆ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಅಹೋರಾತ್ರಿ ಶಿವಪಂಚಾಕ್ಷರಿ ಪಠಣವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಮನೆಯಲ್ಲಿ ಮಕ್ಕಳಿಗೆ ಉತ್ತಮಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಧರ್ಮಸ್ಥಳದಲ್ಲಿ ಪ್ರತಿವರ್ಷ ಭಜನಾ ತರಬೇತಿ ಕಮ್ಮಟ ಆಯೋಜಿಸುತ್ತಿದ್ದು ಇದರಿಂದಾಗಿ ಊರಿನ ಭಜನಾ ಮಂದಿರಗಳು ಶ್ರದ್ಧಾ - ಭಕ್ತಿಯ ಧಾರ್ಮಿಕ ಚಟುವಟಿಕೆಗಳ ಕೇಂದ್ರಗಳಾಗಿ ಬೆಳೆಯುತ್ತಿವೆ, ಬೆಳಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಸಂಸ್ಕಾರ ಮೂಡಿಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ನಿತ್ಯವೂ ಮನೆಯಲ್ಲಿ ಮನೆ ದೇವರನ್ನು, ಇಷ್ಟ ದೇವರನ್ನು ಪ್ರಾರ್ಥಿಸಿದ ಬಳಿಕ ವರ್ಷಕ್ಕೊಮ್ಮೆ ವಿಶೇಷ ಸಾನ್ನಿಧ್ಯ ಇರುವ ಧರ್ಮಸ್ಥಳ, ಕಟೀಲು, ಸುಬ್ರಹ್ಮಣ್ಯ, ಉಡುಪಿ ಮೊದಲಾದ ಕ್ಷೇತ್ರಗಳಿಗೆ ಹೋಗಿ ಶ್ರದ್ಧಾ-ಭಕ್ತಿಯಿಂದ ಸೇವೆ ಸಲ್ಲಿಸಬಹುದು ಎಂದು ಅವರು ಸಲಹೆ ನೀಡಿದರು.
ಬೆಂಗಳೂರು, ಮೈಸೂರು, ಹಾಸನ, ಮಂಡ್ಯ ಮೊದಲಾದ ಅನೇಕ ಊರುಗಳಿಂದ ಪ್ರತಿವರ್ಷ ಸಾವಿರಾರು ಮಂದಿ ಶ್ರದ್ಧಾ-ಭಕ್ತಿಯಿಂದ ಪಾದಯಾತ್ರೆಯಲ್ಲಿ ಧರ್ಮಸ್ಥಳಕ್ಕೆ ಬರುತ್ತಾರೆ. ದೇಹದ ಪಾವಿತ್ರ್ಯತೆಕಾಪಾಡಲು ಶಿಸ್ತಿನಿಂದ ಅವರು ಸ್ವಚ್ಛತೆಗೆ ಆದ್ಯತೆ ನೀಡಿ ಪರಿಶುದ್ಧ ಮನ-ವಚನ-ಕಾಯದಿಂದ ಪಾದಯಾತ್ರೆ ಮಾಡಿತಮ್ಮ ಕಷ್ಟಗಳನ್ನೆಲ್ಲ ಪರಿಹರಿಸಿಕೊಳ್ಳುತ್ತಾರೆ. ಇಲ್ಲಿ ಬಂದ ಮೇಲೆ ಅವರಿಗೆ ಮಾನಸಿಕ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.
ಪಾದಯಾತ್ರಿಗಳ ಪರವಾಗಿ ಬೆಂಗಳೂರಿನ ರಮೇಶ್ ಮಾತನಾಡಿ ಪಾದಯಾತ್ರೆಯಿಂದ ತನಗೆ ವಿಶೇಷ ಶಾಂತಿ, ನೆಮ್ಮದಿ ದೊರಕಿದೆ ಎಂದು ಹೇಳಿದರು. ಅಹೋರಾತ್ರಿ ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರು ಸೀಯಾಳ ಅಭಿಷೇಕ, ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.
ದೇವಸ್ಥಾನ ಆವರಣದಲ್ಲಿ ಅಹೋರಾತ್ರಿ ಭಕ್ತರು ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನ ಮಾಡಿದರು. ಶಿವರಾತ್ರಿಯಿಂದ ಲೋಕ ಕಲ್ಯಾಣವಾಗಲಿ ಎಂದು ಹೆಗ್ಗಡೆಯವರು ಹಾರೈಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್, ಮಾಣಿಲ ಮೋಹನದಾಸ ಸ್ವಾಮೀಜಿ, ಪಾದಯಾತ್ರಿಗಳ ಸಂಘದ ನಾಯಕ ಬೆಂಗಳೂರಿನ ಹನುಮಂತಪ್ಪ ಮತ್ತು ಮರಿಯಪ್ಪ ಉಪಸ್ಥಿತರಿದ್ದರು.