ಉಜಿರೆ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಕೆನರಾ ಬ್ಯಾಂಕ್ ವತಿಯಿಂದ ಉಜಿರೆಯಲ್ಲಿ ಸಿದ್ಧವನ ಗುರುಕುಲಕ್ಕೆ ಕೊಡುಗೆಯಾಗಿ ನೀಡಿದ ಬಿಸಿ ನೀರಿನ ಘಟಕವನ್ನು ಗುರುವಾರ ಅವರು ಬ್ಯಾಂಕಿನ ಮಂಗಳೂರು ವೃತ್ತದ ಮಹಾಪ್ರಬಂಧಕ ಬಿ. ಸುಧಾಕರ ಕೊಠಾರಿ ಅವರಿಂದ ಸ್ವೀಕರಿಸಿ ಮಾತನಾಡಿದರು.

ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾಗಿದ್ದ ಮಾತನಾಡುವ ಮಂಜುನಾಥ ಎಂದೇ ಚಿರಪರಿಚಿತರಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು 1940 ರಲ್ಲಿ ಉಜಿರೆಯಲ್ಲಿ ಪ್ರಶಾಂತ ಪ್ರಾಕೃತಿಕ ಪರಿಸರದಲ್ಲಿರುವ ಪುಣ್ಯಭೂಮಿಯಲ್ಲಿ ಸಿದ್ಧವನ ಗುರಕುಲವನ್ನು ಪ್ರಾರಂಭಿಸಿದರು. ಇಲ್ಲಿ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ, ಶ್ರಮದಾನ, ಹೈನುಗಾರಿಕೆ, ಕೃಷಿ, ಭಜನೆ, ಯೋಗಾಭ್ಯಾಸ ಮೊದಲಾದ ಚಟುವಟಿಕೆಗಳಲ್ಲಿಯೂ ಮಾಹಿತಿ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತದೆ.

ತಾನು ಕೂಡಾ ಗುರುಕುಲದಲ್ಲಿ ಕೆಲವು ತಿಂಗಳು ವಾಸ್ತವ್ಯ ಇದ್ದುದನ್ನು ಹೆಗ್ಗಡೆಯವರು ಸ್ಮರಿಸಿದರು. ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿಯೊಂದಿಗೆ ಓದಲು, ಬರೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಗುರುಕುಲದಲ್ಲಿರುವ ಅವಕಾಶಗಳ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ಕೆನರಾ ಬ್ಯಾಂಕಿನ ಉಪಮಹಾಪ್ರಬಂಧಕ ಕೆ.ಎಸ್. ಉದಯ್, ಪುತ್ತೂರು ವಿಭಾಗದ ಹಿರಿಯ ಬ್ಯಾಂಕ್ ಅಧಿಕಾರಿ ನರೇಂದ್ರ ರೆಡ್ಡಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ, ಪೂರಣ್‌ವರ್ಮ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು.

ರುಡ್‌ಸೆಟ್ ಸಂಸ್ಥೆಗಳ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ ಕಲ್ಲಾಪುರ  ಸ್ವಾಗತಿಸಿದರು. ಸಿದ್ಧವನ ಗುರುಕುಲದ ಪಾಲಕ ಕೇಶವ ಧನ್ಯವಾದವಿತ್ತರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.