ಉಜಿರೆ: ಸಂಸ್ಥೆಯ ನೌಕರರು ಕೀಳರಿಮೆ ಇಲ್ಲದೆ ವೃತ್ತಿ ಗೌರವವನ್ನು ಬೆಳೆಸಿಕೊಳ್ಳಬೇಕು. ತಮ್ಮ ಉಜ್ವಲ ಭವಿಷ್ಯಕ್ಕೆ ಅವಕಾಶ ನೀಡಿದ ಸಂಸ್ಥೆ ಬಗ್ಯೆ ಆದರಾಭಿಮಾನ ಹೊಂದಿ, ಸಂಸ್ಥೆಯ ಪ್ರಗತಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು, ಬದ್ಧರಾಗಬೇಕು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಅವರು ಗುರುವಾರ ಉಜಿರೆಯಲ್ಲಿ ಸಿದ್ಧವನ ಗುರುಕುಲದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ನೌಕರರಿಗಾಗಿ ಆಯೋಜಿಸಿದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ವಿಭಿನ್ನವಾಗಿ ಬೆಳೆಯುವುದಕ್ಕೆ ಸಂಸ್ಥೆಯ ನೌಕರರ ಶ್ರದ್ಧಾ-ಭಕ್ತಿಯ ಸೇವೆ ಹಾಗೂ ಕರ್ತವ್ಯ ನಿಷ್ಠೆಯೇ ಕಾರಣವಾಗಿದೆ ಎಂದು ಹೇಳಿ ಅವರು ನೌಕರರ ದಕ್ಷ ಸೇವೆಗಾಗಿ ಅಭಿನಂದಿಸಿದರು.

ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ಭಟ್ ಬಿಳಿನೆಲೆ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಡಾ. ಕುಮಾರ ಹೆಗ್ಡೆ, ಡಾ. ಅಶೋಕ ಕುಮಾರ್, ಡಾ. ಪ್ರಶಾಂತ ಶೆಟ್ಟಿ, ಡಾ. ಪ್ರಮೋದ್ ಕುಮಾರ್, ಸುನಿಲ್ ಪಂಡಿತ್ ಮತ್ತು ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಪಿ. ವಿಶ್ವನಾಥ್ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು. ಬೆಳಾಲು ಎಸ್.ಡಿ.ಎಂ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.