ಉಜಿರೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಮಾಹಿತಿಯೊಂದಿಗೆ ತನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಯೆ ಅರಿವು, ಜಾಗೃತಿ ಮೂಡಿಸಿ ನ್ಯಾಯ ಒದಗಿಸುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬೆಂಗಳೂರಿನ ಎಚ್. ಶಶಿಧರ ಶೆಟ್ಟಿ ಹೇಳಿದರು.
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಬೆಳ್ತಂಗಡಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಜಂಟಿ ಆಶ್ರಯದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುರ್ಬಲ ವರ್ಗದವರು, ಮಹಿಳೆಯರು ಮತ್ತು ಮಕ್ಕಳು, ಶೋಷಿತ ವರ್ಗದವರಿಗೆ ಹಾಗೂ ಮಾನಸಿಕ ಕ್ಷೋಭೆಗೆ ಒಳಗಾದವರಿಗೆ ಅವರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಉಚಿತ ಕಾನೂನು ಸೇವೆ ನೀಡಲಾಗುತ್ತದೆ.
ನಾಲ್ಕು ಬಾರಿ ಆಯೋಜಿಸಿದ ಲೋಕ ಅದಾಲತ್‍ನಲ್ಲಿ 10,97,000 ಪ್ರಕರಣಗಳನ್ನು ಮುಕ್ತ ಚರ್ಚೆ ಮೂಲಕ ಸೌಹಾರ್ದಯುತವಾಗಿ ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ. ದೇಶದ ಅಮೂಲ್ಯ ಮಾನವ ಸಂಪನ್ಮೂಲವಾದ ಯುವಜನತೆ ಪ್ರಗತಿಯ ರೂವಾರಿಗಳಾಗಿದ್ದು, ಸಂವಿಧಾನ ಹಾಗೂ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಯೆ ಸಮಗ್ರ ಮಾಹಿತಿ ಹೊಂದಿರಬೇಕು. ಆದರ್ಶ ವ್ಯಕ್ತಿಗಳ ಜೀವನಚರಿತ್ರೆಅರಿಯಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮೊಬೈಲ್ ಫೋನ್, ವಾಟ್ಸಪ್, ಟ್ವೀಟರ್ ಮೊದಲಾದವುಗಳನ್ನು ಹಿತ-ಮಿತವಾಗಿ ಬಳಸಬೇಕು ಎಂದುಅವರು ಸಲಹೆ ನೀಡಿದರು.
ಪ್ರೌಢಶಾಲಾ ಶಿಕ್ಷಣದ ಜೊತೆಗೆ ಕೃಷಿ, ಹೈನುಗಾರಿಕೆ, ಅಡುಗೆ ಮಾಡುವುದು, ತರಕಾರಿ ಬೆಳೆಸುವುದು,ಕ್ಷೌರ ಮಾಡುವುದು ಮೊದಲಾದ ಜೀವನ ಶಿಕ್ಷಣ ನೀಡುವ ಉಜಿರೆಯ ರತ್ನ ಮಾನಸ ಆದರ್ಶ ಬದುಕುರೂಪಿಸುವ ವಿಶ್ವವಿದ್ಯಾಲಯವಾಗಿದೆ ಎಂದು ತನ್ನ ಶಾಲಾ ಜೀವನದ ಮಧುರ ಕ್ಷಣಗಳನ್ನು ಧನ್ಯತೆಯಿಂದ ಅವರು ಸ್ಮರಿಸಿದರು. ಸಭಾ ಕಾರ್ಯಕ್ರಮದ ಬಳಿಕ ರತ್ನ ಮಾನಸಕ್ಕೆ ಭೇಟಿ ನೀಡಿ ಇಂದಿನ ವಿದ್ಯಾರ್ಥಿಗಳೊಂದಿಗೆ ಅನುಭವ ಹಂಚಿಕೊಂಡು ಶುಭ ಹಾರೈಸಿದರು.
ಬೆಳ್ತಂಗಡಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೂರ್ತಿ ಬಿ.ಕೆ., ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ ಕೆ.ಜಿ., ವಕೀಲರ ಸಂಘದ ಅಧ್ಯಕ್ಷ ಎಲೋಶಿಯಸ್ ಲೋಬೊ ಶುಭಾಶಂಸನೆ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ವಕೀಲ ಬಿ.ಕೆ. ಧನಂಜಯ ರಾವ್ ಮಾತನಾಡಿ, ಆನ್‍ಲೈನ್ ಶಿಕ್ಷಣದ ನೆಪದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ದುರ್ಬಳಕೆ ಮಾಡುತ್ತಾರೆ. ಸಂದೇಶ ಹಾಗೂ ಚಿತ್ರಗಳ ವಿನಿಮಯದ ಮೂಲಕ ಮಾನಸಿಕ ಖಿನ್ನತೆಗೊಳಗಾಗಿ ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕಾನೂನು ನಿಂತ ನೀರಿನಂತಲ್ಲ. ಶಾಸಕಾಂಗದ ಮೂಲಕ ಸಂದರ್ಭ ಹಾಗೂ ಪ್ರಕರಣವನ್ನು ಹೊಂದಿಕೊಂಡು ಸೂಕ್ತ ಬದಲಾವಣೆಯೊಂದಿಗೆ ಕಾನೂನಿನ ಬಳಕೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ದಿನೇಶ ಚೌಟ ಅಧ್ಯಕ್ಷತೆ ವಹಿಸಿದರು.ಉಪ ಪ್ರಾಂಶುಪಾಲ ಪ್ರಮೋದ್‍ಕುಮಾರ್ ಸ್ವಾಗತಿಸಿದರು.ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ಧನ್ಯವಾದವಿತ್ತರು.
ಪ್ರೊ. ದಿವ್ಯಕುಮಾರಿಕಾರ್ಯಕ್ರಮ ನಿರ್ವಹಿಸಿದರು.