ಯಾವಾಗಲೂ ಸಂತೋಷವಾಗಿರುವುದು ಕೂಡ ಅಷ್ಟು ಸುಲಭದ ಮಾತಲ್ಲ.

ಸಣ್ಣ ಸಣ್ಣ ಗೆಲುವಿಗೂ ಸಂಭ್ರಮಿಸುವುದು ಕೂಡ ಸಾಧನೆಯೇ...ಮಕ್ಕಳಿಗೆ ತನ್ನಿಷ್ಟದ ಆಟಿಕೆ ನೀಡಿದಾಗ ಪಡುವ ಸಂಭ್ರಮ ಚಿಟ್ಟೆಯೊಂದು ಹಿಡಿದಾಗ ಕುಣಿದು ಕುಪ್ಪಳಿಸುವ ರೀತಿ ಕಂಡು ನನಗೆನಿಸಿತು  ಮತ್ತೆ ಮಗುವಾಗಬೇಕಿದೆ. ಎಲ್ಲವನ್ನು ಮರೆತು  ಬೇಸರವನ್ನು ಭೂವಿಯಲ್ಲಿ ಅದುಮಿ ಕುಣಿಯಬೇಕಿದೆ. ಒತ್ತಡದ  ಜೀವನಶೈಲಿಯಲ್ಲಿ  ಸಂತೋಷದ ಹುಡುಕಾಟ. ದೊಡ್ಡ ಗೆಲುವಿಗಾಗಿ ನಿರಂತರ ಹೋರಾಟ..ಸಣ್ಣ ಗೆಲುವಿಗೆ ನಿರ್ಲಕ್ಷ್ಯ ...ಸಂಭ್ರಮಕ್ಕೂ ಮುಂದೂಡುವಿಕೆ.

ಒಳ್ಳೆಯ ಅಂಕ ಪಡೆದು ಉತ್ತಿರ್ಣವಾದರೂ ತನ್ನಿಚ್ಛೆಯಂತೆ ಕೆಲಸ  ಸಿಗಲಿ ನಂತರ ಸಂಭ್ರಮಿಸೋಣ  ಅಂತಿವಿ ಕೆಲಸ ಸಿಕ್ಕಿದಾಗ ಬಡ್ತಿಯಾಗಲಿ ಮನೆ ಕಾರು ಮದುವೆ ಮಕ್ಕಳು ಆಗಲಿ ಸಂಭ್ರಮ ಆಚರಣೆಸೋಣ ಅಂತಿವಲ್ಲ ಕೊನೆಗೆ ಯಾವುದಕ್ಕೂ ಸಂಭ್ರಮ ಪಡದೆ ಸ್ಮಶಾನ ಸೇರತಿವಿ... ಸಂತೋಷವಾಗಿರಲು ನೆಪಗಳು ಬೇಕೆ? 

ನಮ್ಮ ಮಹತ್ವಾಕಾಂಕ್ಷೆಗಳ ಬೆನ್ನು ಹತ್ತಿ ನಾವು ನಮಗೆ ಅರಿವಿಲ್ಲದೆಯೇ ನಕಾರಾತ್ಮಕ ಮನೋಭಾವವನ್ನು ಸಹಜಗುಣವನ್ನಾಗಿ ಮಾಡಿಕೊಂಡಿರುತ್ತೇವೆ. ಇದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಿರಂತರ ಅತೃಪ್ತಿಯಲ್ಲಿ ಬದುಕು ಮುಂದುವರಿಯುತ್ತದೆ. ಸಹಜವಾಗಿಯೇ ಇದು ಒತ್ತಡಕ್ಕೆ ಕಾರಣ ವಾಗುತ್ತದೆ. ಈ ಒತ್ತಡ ಮತ್ತಷ್ಟು ಸಂತೋಷಗಳನ್ನು ಕಿತ್ತುಕೊಳ್ಳಲು ತೊಡಗುತ್ತದೆ.

ನಮ್ಮೊಳಗೆ ನಮಗೆ ಕಂಡುಕೊಳ್ಳಲಾಗದ ಸಂತೋಷವನ್ನು ಮತ್ತ್ಯಾರೋ ತಂದು ಕೊಡಲು ಸಾಧ್ಯವಿಲ್ಲ. ಮಾನಸಿಕ ಶಾಂತಿಯ ವಿಚಾರವೂ ಅಷ್ಟೇ. ಇವೆಲ್ಲವನ್ನೂ ನಾವೇ ಶೋಧಿಸಿಕೊಳ್ಳಬೇಕು. ಇದಕ್ಕೆ ಬೇಕಾಗಿರುವುದು ನಮ್ಮದೇ ಮಾರ್ಗ. ಅನೇಕ ಸಲ ನಾವು ನಮ್ಮ ಅಸ್ಥಿರತೆ ಅಭದ್ರತೆಯ ಕಾರಣಕ್ಕಾಗಿ ಪ್ರತಿಯೊಂದನ್ನು ಬೇರೆಯವರಿಗೆ ವಿವರಿಸಿ ಹೇಳಲು ಪ್ರಯತ್ನಿಸುತ್ತೆವೆ ನಾನು ಯಾಕೆ ಹೀಗೆ ಮಾಡಿದೆ ಯಾಕೆ ಹೀಗೆ ಯೋಚಿಸಿ ಯಾಕೆ ಹೀಗೆ ನಡೆದುಕೊಂಡೆ ಯಾಕೆ ಈ ನಿರ್ಧಾರ ತೆಗೆದುಕೊಂಡೆ ಎಂಬುವುದರ ಸಂಪೂರ್ಣ ವಿವರಣೆ ನೀಡುವ ಅಗತ್ಯವಂತೂ ಇಲ್ಲ ನಾನು ಯಾಕೆ ಹೀಗೆ ನಡೆದುಕೊಂಡೆ ಎಂದು ನಮ್ಮ ಮನಸ್ಸಿಗೆ ತಿಳಿದಿದ್ದರೆ ಸಾಕಲ್ಲವೇ ನಮ್ಮ ತಪ್ಪಿದ್ದರೆ ಕ್ಷಮೆ ಕೇಳಬೇಕು ಅದು ಬಿಟ್ಟು ನಮ್ಮ ಯೋಚನೆಯಿಂದ ಹಿಡಿದು ನಮ್ಮ ಪ್ರತಿಕ್ರಿಯೆಯ ಪ್ರತಿ ನಡುವಳಿಕೆಯ ವಿವರಣೆ ಇನ್ನೊಬ್ಬರಿಗೆ ನೀಡುವ ಅಗತ್ಯವಂತೂ ಇಲ್ಲ ನಮ್ಮ ಮನಸ್ಥಿತಿ ಹಾಗೂ ಪರಿಸ್ಥಿತಿಯ  ಅರಿವು ನಮಗಿದ್ದರೆ ಸಾಕು

ಜೀವನದಲ್ಲಿ ನಾವು ಅನೇಕ ಸಾರಿ, ಹಲವು ಕಾರಣಗಳಿಗೆ ಬೇಸರಗೊಳ್ಳುತ್ತೇವೆ. ಕಾರಣವೇ ಇಲ್ಲದೆ ಮನಸ್ಸಿಗೆ ಖೇದವಾಗುತ್ತದೆ. ಅದೇ ನೋವಿನಲ್ಲೇ ನಾವು ಎಷ್ಟೋ ಅಮೂಲ್ಯ ಸಮಯವನ್ನು ಹಾಳುಮಾಡಿಕೊಂಡಿರುತ್ತೇವೆ. ನಮಗೆ ಬೇಸರವಾದಾಗ ಅದರಿಂದ ಹೊರಬರುವ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ‘ಬೇಸರವಾದಾಗ ನಾನು ಇಂತಹ ಕೆಲಸ ಮಾಡಬೇಕು’ ಎಂದುಕೊಂಡು ಅದೇ ದಾರಿಯಲ್ಲಿ ಸಾಗಬೇಕು. ನಮ್ಮ ಮನಸ್ಸು ಸಂತಸಗೊಳ್ಳುವ ಹಾದಿಯನ್ನು ಕಂಡುಕೊಂಡು ಆ ಹಾದಿಯಲ್ಲೇ ಮುಂದುವರಿಯಬೇಕು. ಬೇಸರ ಕಳೆಯಲು ಏನಾದರೂ ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ನಮ್ಮ ಮನಸ್ಸು ದುಃಖ, ನಿರಾಸೆಯೆಡೆಗೆ ಸುಳಿಯದಂತೆ ಮಾಡುತ್ತದೆ, ಜೊತೆಗೆ ಮನಸ್ಸನ್ನು ಸಂತಸದಿಂದಿರುವಂತೆ ನೋಡಿಕೊಳ್ಳುತ್ತದೆ.ನಾವು ಹವ್ಯಾಸವೆಂಬ ಸಸಿಗೆ ರೂಢಿ ಪ್ರೀತಿ ಕಾಳಜಿಯೆಂಬ ನೀರೆರೆದು ಪೋಷಣೆ ಮಾಡಿದರೆ ಖಂಡಿತ ಸಂತಸವೆಂಬ ಸಸಿ ಚಿಗುರೊಡೆಯುವುದರಲ್ಲಿ ಸಂಶಯವಿಲ್ಲ ನೀಡುವ

ಸಂತೋಷವೆಂಬುದು ವಜ್ರ ವೈಡೂರ್ಯದಲ್ಲಿ ಅಡಗಿಲ್ಲ ಯಾವ ಬಂಗಲೆ ಕಾರಲ್ಲಿಯೂ ಬಚ್ಚಿಟ್ಟುಕೊಂಡಿಲ್ಲ ಈಗಿನ ಕಾಲದಲ್ಲಿ ಸಂತೋಷವನ್ನು ಬೆಲೆಬಾಳುವ ನಿರ್ಜಿವ ವಸ್ತುಗಳಲ್ಲಿ ಮಾತ್ರ ಹುಡುಕುವರು ಮನಸ್ಸನ್ನು ಉಲ್ಲಾಸದಿಂದಿರಲು  ವಸ್ತು ಬೇಕಿಲ್ಲ ಅಂತರಂಗದ ಅಂತಸ್ತಿನ ವರ್ಚಸ್ಸನ್ನು ದಿನೇ ದಿನೇ ಹೊಸತನದಿಂದ ಉಚ್ಛ ಸ್ಥಾನಕ್ಕೆ ಕರೆದೊಯ್ಯುವುದು ಹವ್ಯಾಸ ನಮ್ಮಿಷ್ಟದ ಯಾವುದಾದರೂ ಹವ್ಯಾಸವಿರಬಹುದು ಅದನ್ನು ಪ್ರೀತಿಸಬೇಕು ಶ್ರದ್ಧೆಯಿಂದ ಆರಾಧಿಸಬೇಕು.  ಈ ಜಗತ್ತಿನಲ್ಲಿ ನೋವು ಕೊಡುವವರಿಗೇನು ಕಡಿಮೆ ಇಲ್ಲ ನಿಜ ಆದರೆ ಎಲ್ಲರಿಗೂ ಕೊನೆಯನ್ನುವುದಿದೆ ಬದುಕು ಕೊನೆಯಾಗುವ ಮುಂಚೆ ಸಂತಸವೆಂಬ ಸಂಪತ್ತನ್ನು ಸಂಪಾದಿಸಿ ಅನುಭವಿಸುವುದು ನಮ್ಮ ಕೈಯಲ್ಲಿದೆ.

✍ ಅಂಜಲಿ ಶ್ರೀನಿವಾಸ