ಯೋಗ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ವಿಶ್ವಕ್ಕೆ ಭಾರತದ ಕೊಡುಗೆ ಅಪಾರ. ಅದರಲ್ಲಿ ಯೋಗ ಮೇರುಶಿಖರ. ಉತ್ತಮ ಆರೋಗ್ಯ ದೇಹಕ್ಕೆ ಎಷ್ಟು ಮುಖ್ಯವೊ, ಆರೋಗ್ಯಕರ ಜೀವನಕ್ಕೆ ಯೋಗವೂ ಅಷ್ಟೇ ಮುಖ್ಯ..! ಯೋಗ, ಮೈ-ಮನಸ್ಸುಗಳನ್ನು ಸ್ವಸ್ತವಾಗಿರಿಸಲು ಇರುವ ತಂತ್ರಜ್ಞಾನ. ಇವೆರಡು ಸರಿಯಾಗಿದ್ದರೆ, ಬದುಕಿನ ಎಂತದ್ದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಅಸಲಿಗೆ ಸಮಸ್ಯೆಗಳು ಶುರುವಾಗುವುದೇ, ಕೆಲವೊಮ್ಮೆ ನಮ್ಮ ತಪ್ಪು ತಪ್ಪು ನಿರ್ಧಾರಗಳಿಂದ ಮತ್ತು ಅನುಪಯುಕ್ತ ವರ್ತನೆಗಳಿಂದ..! ಯೋಗ ನಮ್ಮೊಳಗಿನ ದುರ್ಬಲತೆಯನ್ನು ಕಿತ್ತೊಗೆದು ಅಂತಃಶಕ್ತಿಯನ್ನು ಜಾಗೃತಗೊಳಿಸಲು ಪರಿಣಾಮಕಾರಿ ಮಾಧ್ಯಮ. ಇದರಿಂದ ನಮ್ಮ ನಡೆ ನುಡಿಗಳೆಡೆಗೆ ನಮ್ಮದೇ ಹಿಡಿತ ಸಾಧಿಸುವಲ್ಲಿ ಸಹಕಾರಿಯಾಗುತ್ತದೆ.

ಇಂತಹ ಯೋಗಪದ್ಧತಿಯನ್ನು ಜಗತ್ತಿಗೆ ನೀಡಿದ ಹೆಮ್ಮೆ ನಮ್ಮ ದೇಶದ್ದು. ಯೋಗ ಆಸನಗಳ ಸರಿಯಾದ ವಿಧಾನಗಳನ್ನು ಆರಿತುಕೊಂಡು, ಅಳವಡಿಸಿಕೊಂಡು ಸಾಧಕರಾದವರು ಅನೇಕರಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಬಾಲ್ಯದಿಂದಲೇ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಮುಂದೊಂದು ದಿನ ಅದರ ಫಲ ಅತ್ಯುತ್ತಮವಾಗಿರುತ್ತದೆ ಎನ್ನುವುದಂತೂ ಸತ್ಯ. ಹಾಗೆಯೇ ನಮ್ಮ ಬಾಲ ಯೋಗ ಪಟು ಕಲಾಶ್ರೀ ತನ್ವಿತಾ. ವಿ ಅವರು ಯೋಗಾಭ್ಯಾಸ ಚಿಕ್ಕಂದಿನಿಂದಲೇ ಆರಂಭಿಸಿ ಅದರಲ್ಲಿ ಪರಿಣಿತಿ ಪಡೆದು ಸಾಧಕಿಯಾಗಿ ಮಿಂಚುತ್ತಿದ್ದಾರೆ. ಪುಷ್ಪಲತಾ  ವಸಂತ್ ದಂಪತಿಯ ಅವರ ಪುತ್ರಿಯಾದ ಇವರು ಮೂಲತಃ ಕುಂದಾಪುರದ ಕುಂದಬಾರಂದಾಡಿಯವರಾದರೂ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವಾಸ.

ಅನೇಕ ಸಂಸ್ಥೆಗಳು ಆಯೋಜಿಸುವ ರಾಷ್ಟೀಯ, ಅಂತರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದವರು. 34 ಚಿನ್ನ, 17ಬೆಳ್ಳಿ, ಮತ್ತು 10 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ 100ಕ್ಕೂ ವೇದಿಕೆಗಳಲ್ಲಿ ಯೋಗ ಪ್ರದರ್ಶನ ನೀಡಿ ಸಾಕಷ್ಟು ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರಗಳನ್ನು ಪಡೆದು, ಅನೇಕ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಯೋಗದಲ್ಲಿ ಅಷ್ಟೇ ಅಲ್ಲದೆ, ಭರತನಾಟ್ಯ, ಯಕ್ಷಗಾನ, ಅಭಿನಯ, ಶಾಸ್ತ್ರೀಯ ನೃತ್ಯ ಹೀಗೆ ಹಲವು ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಶಾಲೆಯ ಓದಿನಲ್ಲೂ ಮುಂದು. ತನುಜಾ ಎಂಬ ಚಿತ್ರದಲ್ಲಿ ಮತ್ತು ಕ್ರಾಂತಿ ಚಿತ್ರದಲ್ಲೂ ಅಭಿನಯಿಸಿ ಬಹುಮುಖ ಪ್ರತಿಭೆಯಾಗಿ ಬೆಳೆಯುತ್ತಿದ್ದಾರೆ. ಚಿಕ್ಕ ವಯಸ್ಸಿಗೆ ಇಷ್ಟೆಲ್ಲ ಸಾಧನೆ ಮಾಡಿ ಗುರುತಿಸಿಕೊಂಡಿರುವ ಇವರು ನಮ್ಮ ನಾಡಿನ ಹೆಮ್ಮೆಯ ಬಾಲ ಪ್ರತಿಭೆ. ಇವರಿಗೆ ನಮ್ಮೆಲ್ಲರ ಕಡೆಯಿಂದಲೂ ಒಂದು ಪ್ರೋತ್ಸಾಹವಿರಲಿ. ಬದುಕಿನ ಹಾದಿ ತುಂಬಾ ಯಶಸ್ಸುಗಳ ಹೂ ಮಳೆ ಸುರಿಯಲಿ ಎಂದು ಆಶಿಸೋಣ.

_ಪಲ್ಲವಿ ಚೆನ್ನಬಸಪ್ಪ✍️