ಮಂಗಳೂರು: ಕೃತಿಗಳು ಎಷ್ಟೇ ಬಂದರೂ ಕೂಡ ಅದರಲ್ಲಿ ಮೌಲ್ಯ ಹೆಚ್ಚಿರಬೇಕು. ಕತೆಗಳ ಸಂಖ್ಯೆ ದೊಡ್ಡದಿದ್ದರೂ ಕೂಡ ಕತೆಗಳ ಗುಣಮಟ್ಟ ಮುಖ್ಯವಾಗುತ್ತದೆ ಎಂದು  ಸಾಹಿತಿ, ಬರಹಗಾರ ಹರಿಯಪ್ಪ ಪೇಜಾವರ ಮಾತನಾಡಿದರು.

ಅವರು ಬುಧವಾರ ನಗರದ ಶ್ರೀನಿವಾಸ ಹೋಟೆಲ್‌ನ ಸಭಾಂಗಣದಲ್ಲಿ ಸಾಹಿತಿ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆಯ ಅವರ ‘ಮುಂಬಯಿ ಮಿಂಚು’ ಲೇಖನಗಳ ಸಂಗ್ರಹ ಹಾಗೂ ಸಮಗ್ರ ಕಥಾ ಸಂಕಲನದ ಬಿಡುಗಡೆ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀನಿವಾಸ ಜೋಕಟ್ಟೆ ಅವರ ಬರಹಗಳು ಸಂಖ್ಯೆಗಿಂತ ಹೆಚ್ಚು ಅದರಲ್ಲಿರುವ ಗುಣಮಟ್ಟ ಹೆಚ್ಚಿರುವುದರಿಂದ  ಓದುಗ ವಲಯದ ಪ್ರೀತಿಯನ್ನು ಸಂಪಾದನೆಯನ್ನು ಮಾಡಿದೆ. ಜೋಕಟ್ಟೆ ತನ್ನ ಬರಹದ ಗುಣಮಟ್ಟವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

‘ಮುಂಬಯಿ ಮಿಂಚು’ ಲೇಖನಗಳ ಸಂಗ್ರಹವನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕರ್ತ ಯು.ಕೆ.ಕುಮಾರ್ ನಾಥ್ ಮಾತನಾಡಿ,

ಸಾಹಿತಿ ಶ್ರೀನಿವಾಸ್ ಜೋಕಟ್ಟೆಯವರು ಮುಂಬಯಿ ನಗರಿಯಲ್ಲಿ ಇದ್ದು ಅಲ್ಲಿನ ವಿಚಾರಗಳನ್ನು  ವಿಭಿನ್ನ ದೃಷ್ಟಿಯಿಂದ ಬರೆಯುವ ಮೂಲಕ ಅವರ ಬರಹಗಳು ಹೆಚ್ಚು ಅಪ್ತವಾಗುತ್ತದೆ. ಮುಂಬಯಿಯ ಪ್ರತಿಯೊಂದು ವಿಚಾರಗಳ ಚಿತ್ರಣಗಳು ಅವರ ಕೃತಿಯಲ್ಲಿ ಅಡಕವಾಗಿದೆ ಎಂದರು.

ಶ್ರೀನಿವಾಸ ಜೋಕಟ್ಟೆ ಅವರ ಸಮಗ್ರ ಕಥಾ ಸಂಕಲನವನ್ನು ಬಿಡುಗಡೆ ಮಾಡಿದ ಮಂಗಳ ವಾರಪತ್ರಿಕೆಯ ಮಂಗಳೂರು ವಿಭಾಗದ ಟಿ.ಕೆ. ಸುನೀಲ್ ಮಾತನಾಡಿ, ಜೋಕಟ್ಟೆಯ ಬರಹಗಳು ಬರೀ ಮುಂಬಯಿಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿ ಕರಾವಳಿಯ ಚಿತ್ರಣವನ್ನು ಜತೆಯಾಗಿ ಇಟ್ಟುಕೊಂಡು ಸಾಗಿಸುವ ಬರವಣಿಗೆಗಳು ಮುದನೀಡುತ್ತದೆ ಎಂದರು.

ಅತಿಥಿಗಳಾಗಿ ಸಾಹಿತಿ, ಉಪನ್ಯಾಸಕಿ ನಾಗವೇಣಿ ಮಂಚಿ ಮಾತನಾಡಿ, 25 ಕೃತಿಗಳನ್ನು ಬರೆಯುವ ಮೂಲಕ ಓದುಗ ವಲಯಕ್ಕೆ ಆಪ್ತರಾಗುತ್ತಾರೆ. ಮುಂಬಯಿಯಂತಹ ಮಹಾನಗರಿಯ ಪರಿಚಯವನ್ನು ಬಹಳ ಸುಂದರವಾಗಿ ಕೃತಿಗಳ ಮೂಲಕ ತೋರಿಸಿದ್ದಾರೆ ಎಂದರು.

ಪತ್ರಕರ್ತ ರಾಮಕೃಷ್ಣ ಆರ್. ಜೋಕಟ್ಟೆ ಅವರು ಬರಹಗಳ ಮೂಲಕ ಎಂದಿಗೂ ಕ್ರಿಯಾಶೀಲರಾಗಿರುವ ವ್ಯಕ್ತಿ ಎಂದರು.  

ಕೃತಿಕಾರ ಶ್ರೀನಿವಾಸ ಜೋಕಟ್ಟೆ ಮಾತನಾಡಿ, ಮುಂಬಯಿ ಮಹಾನಗರಿಯಲ್ಲಿ ಇದ್ದರೂ ಕೂಡ ಊರಿನ ಸೆಳೆತವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗಾಗಲೇ ೩೯ ಕೃತಿಗಳನ್ನು ಬರೆದಿದ್ದೇನೆ. ಆತ್ಮ ಕತೆಯೊಂದು ಬರೆಯುವ ಯೋಜನೆ ಹಾಕಿಕೊಂಡಿದ್ದೇನೆ ಎಂದರು. ಪತ್ರಕರ್ತ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು.