ಭೂಮಿಯ ಹುಣ್ಣಿಮೆ ಮಣ್ಣಿನ ಪೂಜೆಯು
ಮಾಡುತಲಿದ್ದರೆ ಸಂತೋಷಾ
ನಾಮವು ಸುಂದರ ಜೀವನ ಮಂದಿರ ಮೋದದಲಿದ್ದರೆಯಾಮೋದಾ
ಭೀಮನ ಸಂಗಢ ಪಾಂಡವರಿದ್ದರು
ಭಾರತಲ್ಲಿಯೆ ಜೀವಿಸುತಾ
ರಾಮನು ಪಟ್ಟವನೇರಿದ ಮಂದಿರ
ವಿದ್ದುದಯೋಧ್ಯೆಯ ನೆಲದಲ್ಲೀ
ಚಂದಿರ ಜೊನ್ನವ ಚಿಮ್ಮುವ ರೀತಿಯ
ಕಲ್ಪನೆ ನೀಡಲು ಭಾರಿಖುಷೀ
ಸುಂದರ ವಿಶ್ವದ ಭೂಪಟದಲ್ಲಿಹ
ನಮ್ಮಯ ಭೂಮಿಯಲುಂಟು ಸುಖಾ
ಬಂಧುರ ವಿಟ್ಟಿಹ ಸಜ್ಜನ ರೊಂದಿಗೆ
ಬಾಳುವೆ ಮಾಡುವ ಯೋಗವನೂ
ತಂದಿಹ ಭಾರತ ಮಾತೆಗೆ ವಂದನೆ
ಮಾಡಲು ದಕ್ಕಲು ಮೋದವನೂ
ಪಚ್ಚೆಯ ಬಣ್ಣದ ಕಾನನ ದೊಂದಿಗೆ
ಯೆತ್ತರಕೇರಿದ ಬೆಟ್ಟಗಳೂ
ಹೆಚ್ಚಿದ ಹಣ್ಣಿನ ಗೊಂಚಲು ನಾಲಿಗೆ
ಯೆಲ್ಲೆಡೆ ಬೀರುತ ತುಂಬಿಸಿ ನೀರನ್ನೂ
ಕೆಚ್ಚಿನ ವೀರರು ಹುಟ್ಟಿದ ಭೂಮಿಯ
ಲಿಟ್ಟಿರೆ ಪಾದವು ಭಾಗ್ಯವದೂ
ಮೆಚ್ಚಿನ ಭಾರತ ಮಾತೆಯ ಮಕ್ಕಳು
ನಾವೆನುವಾನುಡಿ ಯೋಗವದೂ
ಡಾ ಸುರೇಶ ನೆಗಳಗುಳಿ
ಮಂಗಳೂರು
ಖಗರಾಜ ವೃತ್ತ ಛಂದಸ್ಸು