ಮಂಗಳೂರು: ಜಗತ್ತಿನ ಒಳಿತು ಬಯಸುವ ದೇಶ ಭಾರತ. ತಿಳಿವಳಿಕೆ, ಶಕ್ತಿ, ಸಾಮರ್ಥ್ಯ, ವಿಜ್ಞಾನ ಸಹಿತ ಎಲ್ಲ ಕ್ಷೇತ್ರಗಳಲ್ಲಿ ಉಳಿದ ಎಲ್ಲ ದೇಶಗಳಿಗಿಂತ ಭಾರತ ಮುಂದಿದೆ. ಜಗತ್ತು ಇಂದು ಭಾರತವನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆ ವತಿಯಿಂದ ಶಕ್ತಿ ಕಾಲೇಜಿನ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಗುರುವಾರ ‘ಶಕ್ತಿ- ಸನಾತನ ಸಂಪದ’ ಉಪನ್ಯಾಸ ಸರಣಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಗತ್ತಿಗೆ ಮಾರ್ಗದರ್ಶನ ನೀಡಿದ ದೇಶ ಭಾರತ. ನಮ್ಮ ಸನಾತನ ಪರಂಪರೆಯ ಆದರ್ಶ ಚಿಂತನೆಗಳನ್ನು ಭಾರತ ಎಲ್ಲರಿಗೂ ತಿಳಿಹೇಳಿದೆ. ಜಗತ್ತಿನ ಯಾವುದೇ ದೇಶಕ್ಕೆ ತೆರಳಿದರೂ ಅಲ್ಲಿ ಭಾರತೀಯತೆಯ, ಹಿಂದುತ್ವದ ಕುರುಹು ಇದೆ. ತಾಯಂದಿರು ದೇಶಕ್ಕಾಗಿ ಹೋರಾಟ ಮಾಡಿದ ದೇಶ ಇದ್ದರೆ ಅದು ಭಾರತ ಮಾತ್ರ. ವಿಜ್ಞಾನ, ಖಗೋಳ ಜ್ಞಾನ, ಜ್ಯೋತಿಷ್ಯದಲ್ಲಿ ಭಾರತ ಪ್ರಾಚೀನ ಕಾಲದಲ್ಲೇ ಪರಿಣಿತಿ ಹೊಂದಿತ್ತು. ಮೆಕಾಲೆ ಶಿಕ್ಷಣ ಭಾರತೀಯರನ್ನು ಮಾನಸಿಕವಾಗಿ ವಿದೇಶಿಯರನ್ನಾಗಿಸಿದೆ. ಇದರಿಂದ ನಾವು ಹೊರಬರಬೇಕು. ನಾವು ಎಷ್ಟೇ ಎತ್ತರಕ್ಕೆ ಏರಿದರೂ ನಮ್ಮ ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ಬಿಡಬಾರದು ಎಂದರು.

ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಸನಾತನ ಎಂಬ ಶಬ್ದ ಅತ್ಯಂತ ಪ್ರಾಚೀನವಾದುದು. ಆದರೆ, ಬುದ್ದಿಜೀವಿಗಳು ಎನಿಸಿಕೊಂಡವರು ಸನಾತನದ ಬಗ್ಗೆ ಅಪಾರ್ಥ ಬರುವಂತೆ ಮಾತನಾಡುತ್ತಿರುವುದು ಸರಿಯಲ್ಲ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಾನಸಿಕತೆ ಬೆಳೆಸುವ ಶಿಕ್ಷಣ ನಮಗೆ ಬೇಡ. ಬದಲಾಗಿ ಮಾತೃಮೂಲ ಶಿಕ್ಷಣ ಸಿಗಲಿ. ಮಕ್ಕಳು ಸಂಸ್ಕಾರದ ಆಧಾರದಲ್ಲಿ ಶಿಕ್ಷಣ ಪಡೆಯಲಿ. ಅದಕ್ಕಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿಗೊಳ್ಳಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಕ್ತಿ ಎಜುಕೇಶನ್ ಟ್ರಸ್ಟ್ ಆಡಳಿತಾಧಿಕಾರಿ ಡಾ.ಕೆ. ಸಿ. ನಾೈಕ್  ಮಾತನಾಡಿ, ವಿದ್ಯಾರ್ಥಿಗಳು ದೇಶದ ಸಂಪತ್ತಾಗಿ ಬೆಳೆಯಬೇಕು ಎಂಬುದೇ ನಮ್ಮ ಹಾಗೂ ಸಂಸ್ಥೆಯ ಆಶಯ ಎಂದರು.

ಶಕ್ತಿ ಎಜುಕೇಶನ್ ಟ್ರಸ್ಟ್ ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ಭಾರತೀಯ ಮೌಲ್ಯ ಹಾಗೂ ಚಿಂತನೆಗಳನ್ನು ಮಕ್ಕಳಲ್ಲಿ ಅಳವಡಿಸುವ ಉದ್ದೇಶದೊಂದಿಗೆ ಸಂಸ್ಥೆ ವತಿಯಿಂದ ‘ಶಕ್ತಿ- ಸನಾತನ ಸಂಪದ’ ಉಪನ್ಯಾಸ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಮೂಲಕ ಸನಾತನ ಚಿಂತನೆಯ ಕಡೆಗೆ ಉದಾತ್ತ ಹೆಜ್ಜೆ ಇಡಲು ಶಕ್ತಿ ಸಂಸ್ಥೆ ಮುಂದಾಗಿದೆ. ತಿಂಗಳಲ್ಲಿ ಎರಡು ಶನಿವಾರ ಉಪನ್ಯಾಸ ನಡೆಯಲಿದೆ. ರಾಮಾಯಣ, ಮಹಾಭಾರತ, ಪುರಾಣ, ವೇದ, ಶೌರ್ಯ ಪರಂಪರೆ ಸಹಿತ 25 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಶಕ್ತಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಎಚ್. ಉಪಸ್ಥಿತರಿದ್ದರು. ಶಕ್ತಿ ವಸತಿ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.