ಮಂಗಳೂರು, ಡಿಸೆಂಬರ್ 11: ನರೇಂದ್ರ ಮೋದಿಯವರು ಪ್ರಧಾನಿ ಆದ ಮೇಲೆ ದೇಶದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಕಾಶಿಯಲ್ಲಿ ನವ ಕಾಶಿ ದಿವ್ಯ ಕಾಶಿ ಭವ್ಯ ಕಾಶಿ ಕಾರಿಡಾರನ್ನು ಪ್ರಧಾನಿಯವರು ಸೋಮವಾರ ಆರಂಭಿಸುವರು ಎಂದು ದಕ್ಷಿಣ ಕನ್ನಡ ಬಿಜೆಪಿಯ ಅಧ್ಯಕ್ಷರಾದ ಸುದರ್ಶನ ಮೂಡಬಿದಿರೆಯವರು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಈ ಕಾರ್ಯಕ್ರಮವನ್ನು ನೇರ ನೋಡಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಕಾಶಿ ಹೊಸ ಲೋಕಾರ್ಪಣೆ ಕಾರ್ಯಕ್ರಮ ನೀವೆಲ್ಲ ವೀಕ್ಷಿಸಲು ಅವಕಾಶ ಇದೆ ಎಂದು ಅವರು ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಯಲ್ಲಿ 99.55 ಮತದಾನ ಆಗಿರುವುದು ಈ ಬಾರಿಯ ವಿಶೇಷ. ಇದಕ್ಕೆ ನಮ್ಮ ರಾಜ್ಯದ ಅಧ್ಯಕ್ಷ ನಳಿನ್ ಕುಮಾರ್ ಹಾಗೂ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಸೆಳೆತವೇ ಕಾರಣ ಎಂದು ಅವರು ಹೇಳಿದರು.
ಕೋಟೆಕಾರ್ ಮತ್ತು ವಿಟ್ಲ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆಯಲಿದ್ದು, ಎರಡೂ ಕಡೆ ಪಕ್ಷವು ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಸುದರ್ಶನ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸ್ತೂರಿ ಪಂಜ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಕಾಂಚನ್, ಸುಧೀರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.