ಪುತ್ತೂರು:  ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು, ಇಲ್ಲಿನ ಕಾಲೇಜಿಗೆ ಸ್ವಾಯತ್ತ ಮಾನ್ಯತೆ ದೊರಕಿದ ಸಲುವಾಗಿ ಅದರ ಪ್ರಥಮ ವಾರ್ಷಿಕೋತ್ಸವ ಹಾಗೂ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಅಂಕಪಟ್ಟಿ ವಿತರಣಾ ಸಮಾರಂಭವು ಸೆಪ್ಟೆಂಬರ್ 23ರಂದು ಕಾಲೇಜಿನ ಎಸ್. ಜೆ.ಎಂ ಸಭಾಂಗಣದಲ್ಲಿ ಜರಗಿತು.

ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿದ್ದ, ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಕುಂತಳಾ ಟಿ ಶೆಟ್ಟಿ ಉದ್ಘಾಟಿಸಿದರು. ಮುಂದೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಕಲಿತ ವಿದ್ಯೆಗೆ, ಬೆಳೆದ ಮಣ್ಣಿಗೆ ನಾವು ಋಣ ಸಂದಾಯ ಮಾಡಬೇಕು ಎಂಬ ಸಂದೇಶ ನೀಡಿದರು. "ಕಲ್ಲಾಗಬೇಡಿ, ಮುಳ್ಳಾಗಬೇಡಿ. ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರೈಸುವ ಸತ್ಪ್ರಜೆಗಳಾಗಿ" ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿಗೆ ಸ್ವಾಯತ್ತತೆಯ ಮಾನ್ಯತೆ ದೊರಕಿ ಯಶಸ್ವೀ ಒಂದು ವರ್ಷ ಪೂರೈಸಿದಕ್ಕಾಗಿ ಅಭಿನಂದಿಸಿದರು. 

ಕಾಲೇಜಿನ ಪ್ರಾಂಶುಪಾಲರಾದ ವo.ಡಾ. ಆಂಟನಿ ಪ್ರಕಾಶ್ ಮಾಂತೆರೊ "ನೀವೆಲ್ಲರೂ ಈ ಸ್ವಾಯತ್ತ ಕಾಲೇಜಿನ ಪ್ರತಿನಿಧಿಗಳು. ಈ ಚರಿತ್ರಾರ್ಹ ದಿನದಂದು ಭಗವಂತ ಎಲ್ಲರಿಗೂ ಒಳಿತನ್ನೇ ಮಾಡಲಿ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಹಾಗೆಯೇ ಈ ಸಾಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು" ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕರಾದ  ಅತಿ  ವoದನೀಯ ಲಾರೆನ್ಸ್  ಮಸ್ಕರೇನಸ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧಿಸಬೇಕಾದದ್ದು ಬಹಳಷ್ಟು ಇದೆ. ವಿನಯವೇ ವಿದ್ಯೆಗೆ ಭೂಷಣ ಎನ್ನುವ ರೀತಿಯಲ್ಲಿ ನಡೆದುಕೊಂಡು ಸಂಸ್ಥೆ ಇನ್ನಷ್ಟು ಬೆಳೆಯವಲ್ಲಿ ತಮ್ಮದೇ ಕೊಡುಗೆಯನ್ನು ನೀಡಬೇಕು” ಎಂದು ಹೇಳಿದರು

ಉಪನ್ಯಾಸಕರ ಪರವಾಗಿ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥೆಯಾಗಿರುವ ಡಾ.ಮಾಲಿನಿ.ಕೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ದ್ವಿತೀಯ ಬಿ.ಕಾಂ.ನ ಅಪೂರ್ವ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು."

ಅಂಕಪಟ್ಟಿ ವಿತರಣಾ ಸಮಾರಂಭದಲ್ಲಿ, ಗರಿಷ್ಠ ಅಂಕ ಪಡೆದವರ ಪಟ್ಟಿಯನ್ನು ಕಾಲೇಜಿನ ಪರೀಕ್ಷಾಂಗ ಉಪಕುಲಸಚಿವರಾದ ಕ್ಯಾ. ಜಾನ್ಸನ್ ಡೇವಿಡ್ ಸಿಕ್ವೆರಾ ವಾಚಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಕುಂತಳಾ.ಟಿ.ಶೆಟ್ಟಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ವಿತರಿಸಿದರು. 

ವಿದ್ಯಾರ್ಥಿಗಳಾದ ಅಪರ್ಣಾ ಮತ್ತು ಮಾನಸ ಪ್ರಾರ್ಥಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್.ಎಂ ಸ್ವಾಗತಿಸಿ, ಪರೀಕ್ಷಾಂಗ ಕುಲಸಚಿವರಾದ ಡಾ. ವಿನಯಚಂದ್ರ ವಂದಿಸಿದರು. ಕಾಲೇಜಿನ ಪರೀಕ್ಷಾಂಗ ಉಪಕುಲಸಚಿವರಾದ ಅಭಿಷೇಕ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.