ನೋವೆಲ್ ಕೋವಿಡ್ 19 ಶುಕ್ರವಾರದ 24 ಗಂಟೆಗಳಲ್ಲಿ ಭಾರತಕ್ಕೆ ಮತ್ತು ಕರ್ನಾಟಕಕ್ಕೆ ಹೊಸ ಕೆಟ್ಟ ಸಾವು‌ ದಾಖಲೆಗಳನ್ನು ನೀಡಿತು.

ಕೊರೋನಾದ‌ ದಿನದ ಅತಿ‌ ಹೆಚ್ಚಿನ 4,187 ಸಾವುಗಳು ಭಾರತದಲ್ಲಿ ಹಾಗೂ 592 ದಿನದ ದಾಖಲೆಯ ಸಾವು ಕರ್ನಾಟಕದಲ್ಲಿ ಆದವು. ಕರ್ನಾಟಕ ಬಿಟ್ಟರೆ ಉತ್ತರ ಪ್ರದೇಶದಲ್ಲಿ 372, ತಮಿಳುನಾಡಿನಲ್ಲಿ ‌197 ಕೊರೋನಾ ಮರಣಗಳು ನಿನ್ನೆ ಆದವು.

ಭಾರತದ ನಿನ್ನೆಯ‌ ದಾಖಲೆಯ ಸಾವಿನ ‌ಸಹಿತ ಒಟ್ಟು ದೇಶದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆಯು 2,38,197ಕ್ಕೆ ಏರಿತು.

ಜಾಗತಿಕವಾಗಿ ಒಂದೇ‌ ದಿನ ಅತಿ ಹೆಚ್ಚಿನ ಕೋವಿಡ್ ‌ಮೃತ್ಯು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಜನವರಿ 12ರಂದು ಆಗಿತ್ತು; ಅಂದು ಅಲ್ಲಿ ‌ಅಸು ನೀಗಿದ್ದವರ ಸಂಖ್ಯೆ 4,490.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 4,01,522 ಹೊಸ ಕೊರೋನಾ ಸೋಂಕು ಪ್ರಕರಣಗಳು ಗೋಚರಿಸಿದವು.

2020ರ ಜನವರಿ 30ರಿಂದ 2021ರ‌ ಫೆಬ್ರವರಿ 14ರವರೆಗೆ ಭಾರತದಲ್ಲಿ ಕೋವಿಡ್ ಸೋಂಕಿಗೆ ಒಳಗಾದವರ ಸಂಖ್ಯೆ 1,09,16,482 ಇತ್ತು. ಅದನ್ನು ಮೀರಿ 2021ರ ಫೆಬ್ರವರಿ 14ರಿಂದ ನಿನ್ನೆಯವರೆಗೆ ಭಾರತದಲ್ಲಿ ಕೊರೋನಾ ಸೋಂಕಿಗೀಡಾದವರ‌ ಸಂಖ್ಯೆಯು 1,09,68,039 ಆಗಿದೆ. ಇದರಿಂದಲೇ ಎರಡನೆಯ ಅಲೆಯಲ್ಲಿ ಭಾರತದ ಬವಣೆ ಅರ್ಥ ಮಾಡಿಕೊಳ್ಳಲು ಸಾಧ್ಯ.