ಮಂಗಳೂರು, ಡಿಸೆಂಬರ್ 16: ನಮ್ಮ ರಾಜ್ಯದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ನೀವು ದುರ್ಬಲರು ಎಂದರೆ ಅವರು ದುರ್ಬಲರಾಗುವುದಿಲ್ಲ. ಅವರನ್ನು ರಾಜೀನಾಮೆ ನೀಡಿ ಎಂದು ಯಾರೋ ಜಾಲ ತಾಣಗಳಲ್ಲಿ ಕೇಳಿದರೆ ಅವರು ರಾಜೀನಾಮೆ ನೀಡುವುದಿಲ್ಲ. ನಳಿನ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಪಕ್ಷವು ಹಲವು ಚುನಾವಣೆಗಳನ್ನು ಗೆದ್ದಿದೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡಬಿದಿರೆಯವರು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾಜಿಯವರು ನಳಿನ್ ಕಟೀಲ್ ಅವರ ಕಾರ್ಯ ವೈಖರಿಯನ್ನು ಮೆಚ್ಚಿದ್ದಾರೆ. ಕಟೀಲ್ ಮತ್ತು ನಾನು ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳಲ್ಲಿ, ಬಜರಂಗ ದಳದಲ್ಲಿ ಕೆಲಸ ಮಾಡಿ ರಾಜಕೀಯದಲ್ಲಿ ಬೆಳೆದವರು. ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಅತೃಪ್ತ ಆತ್ಮಗಳು ಅಧ್ಯಕ್ಷರನ್ನು ಹಳಿಯುತ್ತಿವೆ. ಅವರಲ್ಲಿ ಹಲವರು ನಳಿನ್ ಅವರನ್ನು ಹಿಂದೆ ಹೊಗಳಿದವರು. ಬರೇ ಜಾಲ ತಾಣಗಳಲ್ಲಿ ಪ್ರಚಾರ ಮಾಡಿ ಯಾರೂ ನಾಯಕರಾಗಲು ಸಾಧ್ಯವಿಲ್ಲ. ಹಿಂದೂ ಸಂಘಟನೆ ಮಾಡುವುದೂ ಸಾಧ್ಯವಿಲ್ಲ ಎಂದು ಸುದರ್ಶನ್ ಹೇಳಿದರು.


ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಶುದ್ಧ ಮಾಡುವ ಕೆಲಸ ಮಾಡುತ್ತಿದೆ. ಕಾಶಿ, ಅಯೋಧ್ಯೆ, ಗೋವು ಎಲ್ಲ ವಿಷಯದಲ್ಲೂ ನಾವು ಹೇಳಿದಂತೆ ನಡೆದಿದ್ದೇವೆ ಎಂದು ಅವರು ಹೇಳಿದರು.

ಉಪ್ಪಿನಂಗಡಿಯಲ್ಲಿ ಸಮಾಜ ವಿರೋಧಿ ಶಕ್ತಿಗಳು ಗಲಾಟೆ ಮಾಡಿದ್ದಾರೆ. ಪೋಲೀಸರ ಮೇಲೂ ದಾಳಿ ಮಾಡಿದ್ದಾರೆ. ನಾವು ಶಾಂತಿ ಕಾಪಾಡುವತ್ತ ಇದ್ದೇವೆ. ಅಹಿತಕರ ಘಟನೆಗಳನ್ನು ನಡೆಯಲು ಬಿಡುವುದಿಲ್ಲ. ಉಪ್ಪಿನಂಗಡಿಯ  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾವು ಒತ್ತಾಯಿಸುತ್ತೇವೆ ಎಂದು ಸುದರ್ಶನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರವಿಶಂಕರ್ ಮಿಜಾರ್, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು  ಮೊದಲಾದವರು ಉಪಸ್ಥಿತರಿದ್ದರು.