ಮಂಗಳೂರು: ಉಳ್ಳಾಲದ ವೀರರಾಣಿ ಅಬ್ಬಕ್ಕನ ಹೋರಾಟದ ಕಿಚ್ಚು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ಮುನ್ನುಡಿಯಾಗಿದ್ದು ಮಹಿಳೆಯಾದರೂ ಸಹ ಆಕೆಯ ಧೈರ್ಯ ಸಾಹಸವನ್ನು ಎಂದಿಗೂ ಮರೆಯಬಾರದು, ಆಕೆಯೇ ನೈಜ ಸ್ವಾತಂತ್ರ್ಯದ ಚಿತ್ರಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಬಹುದೊಡ್ಡ ಜವಬ್ದಾರಿ ನಮ್ಮದಾಗಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು. 

ಅವರು ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಜಂಟಿ ಸಂಯೋಜನೆಯಲ್ಲಿ  ಡಿಸೆಂಬರ್ 21ರಂದು ಉಳ್ಳಾಲದಲ್ಲಿ ನಡೆಯಲಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮತನಾಡಿದರು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‍ಸಾರ್ ಅಧ್ಯಕ್ಷತೆಯನ್ನು ವಹಿಸಿ, ಉತ್ಸವದ ಬಗ್ಗೆ ಮಾರ್ಗದರ್ಶನ ನೀಡಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗತಾಧ್ಯಕ್ಷ ಜಯರಾಮ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ವೇದಿಕೆಯಲ್ಲಿ ಮೂಲ್ಕಿ ಅರಮನೆಯ ಗೌತಮ್ ಜೈನ್, ಸಾಹಿತಿ ಯೋಗೀಶ್ ಕಾಂಚನ್, ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್, ಸಂತೋಷ್ ಪೂಜಾರಿ ಕಾರ್ಕಳ ಅಬ್ಬಕ್ಕ ಉತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ವಂದಿಸಿದರು, ಅಕಾಡೆಮಿ ಸದಸ್ಯ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.