ಕಾರ್ಕಳ:  ಎಸ್‌ಬಿಸಿ ಕ್ರಿಕೆಟರ್ಸ್ ಕಾರ್ಕಳ ವಲಯ ವತಿಯಿಂದ ಬಂಡಿಮಠ ಫೌಂಡೇಶನ್ ಕಾರ್ಕಳ ಕ್ರಿಕೆಟ್ ಅಸೋಸಿಯೇಶನ್ ಸಹಯೋಗದಲ್ಲಿ ಕಾರ್ಕಳ- ಬೆದ್ರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಕಾರ್ಕಳ ಗಾಂಧಿ ಮೈದಾನದಲ್ಲಿ ಡಿ.8 ರಿಂದ 11 ರ ವರೆಗೆ ನಡೆಯಲಿದೆ.

ಕಾರ್ಕಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಶಾಕಿರ್ ಹುಸೈನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಇದೇ ಮೊದಲ ಬಾರಿಗೆ ಕಾರ್ಕಳ- ಮೂಡುಬಿದಿರೆ ತಾಲೂಕು ಕೇಂದ್ರಿತ ಈ ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೊಳಿಸಲಾಗುತ್ತಿದೆ. ಇದಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳಲಾಗಿದ್ದು, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗರನ್ನು ಸನ್ಮಾನಿಸಲಾಗುವುದು ಎಂದರು.

ಗೌರವಾಧ್ಯಕ್ಷ ಅವಿನಾಶ್ ಜಿ. ಶೆಟ್ಟಿ ಮಾತನಾಡಿ, ಒಟ್ಟು 12 ತಂಡಗಳು ಬಿಡ್ಡಿಂಗ್ ಮಾದರಿಯಲ್ಲಿ ಆಟಗಾರರನ್ನು ಕೂಡಿಸಿಕೊಂಡು ಪಂದ್ಯಾವಳಿ ನಡೆಸಲಾಗುತ್ತದೆ. ಈಗಾಗಲೇ 240 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಥಮ ಬಹುಮಾನವಾಗಿ 1,11,111 ರೂ., ರನ್ನರ್ಸ್‌ಗೆ 66,666 ರೂ., ನಗದು ಬಹುಮಾನ ನೀಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉದ್ಯಮಿಗಳಾದ ರಿಝ್ವಾನ್, ಮಧುರಾಜ್ ಶೆಟ್ಟಿ, ಹರೀಶ್ ಶೆಟ್ಟಿ ಹಾಗೂ ಸಾಯಿನ್ ಉಪಸ್ಥಿತರಿದ್ದರು.