ಕಾರ್ಕಳ: ಮುನಿಯಾಲು–ಪಡುಕೂಡುರು ಖಜಾನೆ ರಸ್ತೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆ ಮಂಜೂರಾಗಿದ್ದ Rs.2.50 ಕೋಟಿ ಮೌಲ್ಯದ ಕಾಮಗಾರಿಯನ್ನು ಟೆಂಡರ್ ಮೂಲಕ ಗುತ್ತಿಗೆದಾರ ಪ್ರಶಾಂತ್ ಶೆಟ್ಟಿ ಮಳವಳ್ಳಿ ಅವರಿಗೆ ನೀಡಲಾಗಿತ್ತು. ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿರುವ ಸಂದರ್ಭದಲ್ಲಿ ಯಾವುದೇ ಅಧಿಕಾರವಿಲ್ಲದೆ ಉದಯಕುಮಾರ್ ಶೆಟ್ಟಿ ಅವರು ರಸ್ತೆ ಅಗೆದು ಅನಧಿಕೃತವಾಗಿ ಕಾಮಗಾರಿಯನ್ನು ಆರಂಭಿಸಿರುವುದು ಗಂಭೀರ ವಿಷಯ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವಿನ್ ನಾಯಕ್ ಆರೋಪಿಸಿದ್ದಾರೆ. ಅವರು ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಗುತ್ತಿಗೆದಾರ ಪ್ರಶಾಂತ್ ಶೆಟ್ಟಿಗೆ ನೋಟಿಸ್ ನೀಡಿರುವುದು ತಿಳಿದುಬಂದಿದೆ. ಆದರೆ ಅಕ್ರಮ ಕಾಮಗಾರಿಗೆ ಕಾರಣಕರ್ತನಾದ ಉದಯಕುಮಾರ್ ಶೆಟ್ಟಿಯ ವಿರುದ್ಧವೂ ಸಮಾನವಾಗಿ ಕಾನೂನು ಕ್ರಮ ಜರುಗಬೇಕು ಎಂದು ನವಿನ್ ನಾಯಕ್ ಆಗ್ರಹಿಸಿದ್ದಾರೆ.
ಟೆಂಡರ್ ಒಬ್ಬರ ಹೆಸರಲ್ಲಿ ಇದ್ದರೂ, ಮತ್ತೊಬ್ಬರು ಹೇಗೆ ರಸ್ತೆಯ ಕೆಲಸವನ್ನು ಪ್ರಾರಂಭಿಸಿದರು? ಎಂಬ ಗಂಭೀರ ಪ್ರಶ್ನೆಯನ್ನು ಮುಂದಿಟ್ಟ ಅವರು, “ಈ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಬೇಕು” ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಕಾನೂನುಬಾಹಿರ ಮತ್ತು ದಬ್ಬಾಳಿಕೆಯ ರಾಜಕೀಯ ಧೋರಣೆಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ನವಿನ್ ನಾಯಕ್ ಆರೋಪಿಸಿದರು. “ನ್ಯದ ಗುತ್ತಿಗೆದಾರರಿಗೆ ಅವಕಾಶ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಕೆಲಸಗಳನ್ನು ಹಸ್ತಕ್ಷೇಪ ಮಾಡುವ ಅನ್ಯಾಯ ನಡೆಯುತ್ತಿದೆ. ಸರ್ಕಾರಿ ಸ್ವತ್ತಿಗೆ ಹಾನಿಯಾದರೂ ಅಧಿಕಾರಿಗಳು ಕಣ್ಣುಮುಚ್ಚಿರುವುದು ಕಳವಳಕಾರಿ,” ಎಂದು ಅವರು ಟೀಕಿಸಿದರು.
ಅಕ್ರಮವಾಗಿ ಸಾರ್ವಜನಿಕ ರಸ್ತೆಯನ್ನು ಅಗೆದು ಸರ್ಕಾರಕ್ಕೆ ನಷ್ಟ ಉಂಟುಮಾಡಿದ ಉದಯಕುಮಾರ್ ಶೆಟ್ಟಿಯ ವಿರುದ್ಧ ಲೋಕೋಪಯೋಗಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನವಿನ್ ನಾಯಕ್ ಪುನಃ ಆಗ್ರಹಿಸಿದರು. “ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನಾವು ಹೋರಾಟಕ್ಕೂ ಸಿದ್ಧ” ಎಂದು ಅವರು ಸ್ಪಷ್ಟಪಡಿಸಿದರು.
ಈ ವೇಳೆ, ಕಾಂಗ್ರೆಸ್ ಮುಖಂಡರು ಬಿಜೆಪಿ ಕಾರ್ಯಕರ್ತರ ವಿರುದ್ಧ ಇಲ್ಲಸಲ್ಲದ FIR ದಾಖಲಿಸುತ್ತಿದ್ದಾರೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಮೊಯ್ಲಿ, ಸತೀಶ್ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.