ಮಂಗಳೂರು, ಅಕ್ಟೋಬರ್ 20: ಕುಂಜಾಡಿಯ ನಳಿನ್ ಕುಮಾರ್ ಅವರು ಕಟೀಲ್ ಹಾಕಿಕೊಂಡು ನೀಚ ನಾಲಿಗೆಯಿಂದ ರಾಜಕೀಯವನ್ನು ಹೊಲಸು ಮಾಡುವುದರ ಹೊರತು ಇನ್ನೇನು ಮಾಡಿಲ್ಲ, ಸಂಸದರಾಗಿ ಇವರ ಕೆಲಸ ಸೊನ್ನೆ ಎಂದು ದ. ಕ. ಜಿಲ್ಲೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಶುಭೋದಯ ಆಳ್ವ ಅವರು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.

ಈ ನಳಿನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಡ್ರಗ್ಸ್ ಪೆಡ್ಲರ್ ಎನ್ನುತ್ತಾರೆ. ಇವರಿಗೆ ಅದರ ಸ್ಪೆಲ್ಲಿಂಗ್ ಗೊತ್ತಿದೆಯೇ? ಇವರು ಮಾದಕ ವ್ಯಸನಿಯಾಗಿ ಈ ಮಾತು ಆಗಿರಬೇಕು. ನಳಿನ್ ಬೆಂಗಳೂರಿನ ಆನಂದ ರಾವ್ ಸರ್ಕಲ್ ನಲ್ಲಿ ಏನು ಮಾಡುತ್ತಿದ್ದರು ಎಂದು ನಮಗೆ ಗೊತ್ತಿದೆ. ಆರೆಸ್ಸೆಸ್ ಎನ್ನುವ ನಳಿನ್ ಅದರ ಸಣ್ಣ ಶಿಸ್ತನ್ನು ಸಹ ಹೊಂದಿಲ್ಲ. ಅದ್ದರಿಂದ ಸಂಘವು ಮತ್ತೊಮ್ಮೆ ಈ ನಳಿನ್ ಮತ್ತು ಶಾಸಕ ಭರತ್ ಶೆಟ್ಟಿಗೆ ಮತ್ತೊಮ್ಮೆ ಶಿಸ್ತು ಕಲಿಸಬೇಕು. ಈ ನಳಿನ್ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಅವರ ವಿರುದ್ಧ ನಾವು ಇನ್ನು ಮುಂದೆ ಕಪ್ಪು ಬಾವುಟ ಹಿಡಿದು ಪ್ರತಿಭಟಿಸುವುದಾಗಿ ಆಳ್ವ ಹೇಳಿದರು.

ಕಾಂಗ್ರಸ್ ಹಿಂದುಳಿದ ಸೆಲ್‌ನ ನಾಯಕ ಗಣೇಶ ಪೂಜಾರಿ ಅವರು ಮಾತನಾಡಿ ಡ್ರಗ್ಸ್ ಪೆಡ್ಲರ್ ಗಳ ಹಣ ಪಡೆದು ಹಂಚುವ ಈ ನಳಿನ್ ಸಂಸದನಾಗಿ ತನ್ನ ಸ್ವಾರ್ಥ ಬಿಟ್ಟು ಇನ್ನೇನೂ ಮಾಡಿಲ್ಲ. ಅದಾನಿ ಕೂಟ ಮೊದಲಾದವರ ಮಾದಕ ಸಂಪರ್ಕ ಬಿಚ್ಚಿಕೊಳ್ಳುವ ಕಾಲದಲ್ಲಿ ನಳಿನ್ ನಾಲಿಗೆ ಹರಿಬಿಟ್ಟಿದ್ದಾರೆ. ಇಲ್ಲಿ ಜನಾರ್ದನ ಪೂಜಾರಿ ಅವರು ಸಂಸದರಾಗಿ 26 ಕೋಟಿ ಜನರಿಗೆ ಸಾಲ ಮೇಳದ ಮೂಲಕ ಸಹಾಯ ಮಾಡಿದರು. ಜನಸಾಮಾನ್ಯರ ಕಷ್ಟವನ್ನು ತನ್ನದೆಂದು ಸೇವೆ ಸಲ್ಲಿಸಿದರು. ಈ ನಳಿನ್ ಸ್ವಂತ ಕಟ್ಟಡ ಸಾಧನೆ ಮಾತ್ರ ಮಾಡಿದ್ದಾರೆ. ಕಾಂಗ್ರೆಸ್‌ನ ನಾಯಕರು ದೇಶಕ್ಕೆ ಸಲ್ಲಿಸಿದ ಸೇವೆಯ ಅರಿವಿಲ್ಲದ ನಳಿನ್ ಕುಬ್ಜ ವಿಚಾರದ ಹೊಂಡಕ್ಕೆ ಬಿದ್ದಿದ್ದಾರೆ. ಊರಲ್ಲಿ ಅನೈತಿಕ ಪೋಲೀಸ್‌ಗಿರಿ ನಡೆಸುವ, ನಿರುದ್ಯೋಗ ಹುಟ್ಟಿಸಿ ಯುವಕರನ್ನು ಅಡ್ಡ ಹಾದಿಗೆ ನಡೆಸುವ ಈ ನಳಿನ್‌ನಿಂದ ಇನ್ನೇನು ನಿರೀಕ್ಷೆ ಇದ್ದೀತು ಎಂದು ಗಣೇಶ್ ಪೂಜಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನೀರಜ್ ಪಾಲ್, ಟಿ. ಕೆ. ಸುಧೀರ್, ಯೋಗೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.