ಮಂಗಳೂರು ಫೆ. 25: ಮಂಗಳೂರುನಲ್ಲಿದ್ದು ಎರಡೇ ದಿನದಲ್ಲಿ ಮಹಾಶಿ ವರಾತ್ರಿಯ ಒಳಗಾಗಿ ಓದಿ ಝೋಯಾಳಂತೆ ಪೆಟ್ಟಿಗೆ ತೆರೆದ ಅನುಭವ ಹಾಗೂ ಮೈಮನಗಳನ್ನು ಸೋಕಿದ ಅನುಭಾವ ನನಗಾಯಿತು ಎಂದು ನಾಡಿನ ಹೆಸರಾಂತ ಲೇಖಕ, ಪತ್ರಕರ್ತ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ವಿತೋರಿ ಕಾರ್ಕಳ್ (ವಿಕ್ಟರ್ ಮಾತಾಯಸ್)  ಅಭಿಪ್ರಾಯ ಪಟ್ಟರು.

ಮೂರು ಭೂಖಂಡಗಳು, ಆರು ದೇಶಗಳು, 7 ರಿಂದ ಆರಂಭಿಸಿ 21ನೇ ಶತಮಾನದ ತನಕ ಹರಡಿರುವ ವಿಸ್ತಾರ ಕಾನ್ವಸನ್ನು ಮಂಗಳೂರು ಶಕ್ತಿನಗರದ ಕೊನೆಯಲ್ಲಿ, ಒಂದು ಕೋಣೆಯಲ್ಲಿ, ಬೆವರ ಬೇಗೆಯಾಗುವ ಮೈಯನ್ನು, ಗಾಳಿಯನ್ನು ರಫ್ ಅಂತ ರಾಚುವ ಪೆಡಸ್ಟಲ್ ಫ್ಯಾನಿಗೆ ಒಡ್ಡಿ ಅಡ್ಡಾದಿಡ್ಡಿ ಕೂತಾದರೂ ಸೈ, ಮುಗಿಸಿಯೇ ಬಿಡುವ, ಮಲಿಕಾಳ ಪೆಟ್ಟಿಗೆಯೊಳಗೆ ಏನಿದೆ ಎಂದು ನೋಡುವ ಎಂಬ ಪುಟದಿಂದ ಪುಟಕ್ಕೆ ಬೆಳೆಯುತ್ತಾ ಹೋಗುವ ಕುತೂಹಲವೇ ಈ ಕಾದಂಬರಿಯ ಜೀವಾಳ.

ಇದನ್ನು ಪ್ರವಾಸ ಕಥನವೆನ್ನಿ, ಕಾದಂಬರಿಯೆನ್ನಿ, ಸಾಹಿತ್ಯದ ಯಾವುದೇ ಪ್ರಕಾರವೆನ್ನಿ ಅಥವಾ ಪಾತ್ರವಾಗಿಯೂ ಎಲೆಯ ಮೇಲಣ ನೀರ ಬಿಂದುವಿನಂತೆ ಅಂಟಿಯೂ ಅಂಟದ, ಬೊಳುವಾರರ ಕಥೆ ಹೇಳುವ ನಿರ್ಲಿಪ್ತ ಶೈಲಿಯೆನ್ನಿ, ಓದಿನ ಓಘಕ್ಕೆ ಯಾವುದೇ ತಡೆಯಿಲ್ಲ. ಪುಸ್ತಕ ಕೈಗೆತ್ತಿಕೊಳ್ಳಿ, ಓದಿ ಮುಗಿಸದೆ ಬೇರೆ ದಾರಿಯಿಲ್ಲ ಎಂದು ಅನಿಸದಿದ್ದರೆ ಮತ್ತೆ ಕೇಳಿ ಎಂದೂ ವಿತೊರಿ ಕಾರ್ಕಳ ತಿಳಿಸಿದ್ದಾರೆ.