ಮಂಗಳೂರು, ಜು 25: ಮಂಗಳೂರಿನ ಅಂಬ್ಲಮೊಗರು  ಗ್ರಾಮದ ಮದಕದಲ್ಲಿರುವ ವಿದ್ಯಾರತ್ನ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಸಂಸ್ಥೆಯ ಸಹಯೋಗದೊಂದಿಗೆ ವ್ಯಸನ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ನೀಡುವ ಕಾರ್ಯಕ್ರಮವನ್ನು ಜುಲೈ ದಿನಾಂಕ 25ರಂದು ನಡೆಸಲಾಯಿತು.

ಸಂಸ್ಥೆಯ ಸಂಚಾಲಕರಾದ ರಾಮದಾಸ್ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೊಣಾಜೆ ವಲಯ ಮೇಲ್ವಿಚಾರಕ  ಮಾಧವ ಎಮ್ ರವರು ಮುಖ್ಯ ಅತಿಥಿಯಾಗಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ  ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಸಲಹೆಗಾರ ಹಾಗೂಮಂಗಳಾ ಆಸ್ಪತ್ರೆಯ ಮೂಲವ್ಯಾಧಿ  ಶಸ್ತ್ರ ಚಿಕಿತ್ಸಕ  ಡಾ ಸುರೇಶ ನೆಗಳಗುಳಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಚಟಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ದೀರ್ಘ ಉಪಾನ್ಯಾಸ ನೀಡಿದರು.

ಉಭಯೇಂದ್ರಿಯ ಎನಿಸಿದ ಮನಸ್ಸು ಎಲ್ಲಕ್ಕೂ ಮೂಲ ಹಾಗೂ ಇಂದ್ರಿಯ  ನಿಯಂತ್ರಣ ಅತ್ಯಂತ ಅಗತ್ಯವಾಗಿದ್ದು ಸದ್ವೃತ್ತವೇ ಸೌಖ್ಯದ ಪಂಚಾಂಗ. ವ್ಯಸನವಿದ್ದರೆ ಬಾಳು ಹಸನು ಆಗದು ಎಂದರಲ್ಲದೆ. ಹಲವು  ತತ್ಸಂಬಂಧೀ ಸ್ವರಚಿತ ಗಜಲ್ ಮತ್ತು ಮುಕ್ತಕಗಳನ್ನು ವಾಚಿಸಿದರು.

ಮಾಧವ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದುಶ್ಚಟಗಳು ಬೇಗ ಆಕರ್ಷಿಸುತ್ತವೆ ಅನಂತರ ಬಿಟ್ಟು ಬಿಡಲು ಅಸಾಧ್ಯವಾಗಿ ಬಿಡುತ್ತವೆ. ಸಜ್ಜನರ ಸಂಗ ಮಾತ್ರ ಇದಕ್ಕೆ ಪರಿಹಾರ ಎಂದರು.

ಅಧ್ಯಕ್ಷ‌ ರಾಮದಾಸ‌ ಶೆಟ್ಡಿ‌ ಮುಖ್ಯೋಪಾಧ್ಯಾಯಿನಿ .ಐಶ್ವರ್ಯ ಲಕ್ಷ್ಮಿ , ಗ್ರಾಮಾಭಿವೃಧ್ದಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ಲೋಲಾಕ್ಷಿ ಮತ್ತು ಒಕ್ಕೂಟ ಅಧ್ಯಕ್ಚ  ಮಂಜುನಾಥ ಆಚಾರ್ಯ ಸಹಿತ ಸಹ ಅಧ್ಯಾಪಕರೂ, ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಪೋಷಕರೂ  ಭಾಗವಹಿಸಿದ್ದ ಕಾರ್ಯಕ್ರಮ ಧನ್ಯವಾದ ಸಮರ್ಪಣೆಯೊಂದಿಗೆ ಮುಕ್ತಾಯವಾಯಿತು.