ಮಂಗಳೂರು: ಉತ್ತಮ ಶಿಕ್ಷಕರು ಯಾವಾಗಲೂ ಸಂಶೋಧಕರೇ ಆಗಿರುತ್ತಾರೆ. ಏಕೆಂದರೆ ಸಂಶೋಧನೆ ಮತ್ತು ಬೋಧನೆ ಪರಸ್ಪರ ಪೂರಕವಾಗಿರುತ್ತವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಹಾಗೂ ಕಲಾ ನಿಕಾಯದ ಡೀನ್ ಡಾ. ಪರಿಣಿತಾ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಂಶೋಧನಾ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸಂಶೋಧನಾ ವಿಧಾನದ ಕುರಿತು ಏಳು ದಿನದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಅಧ್ಯಾಪಕರೆಲ್ಲರೂ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿಗಳನ್ನು ಪರಿಚಯಿಸಿದಾಗ ಹೆಚ್ಚು ಸಂಶೋಧನೆ ಕೈಗೊಳ್ಳಲು ಪ್ರೋತ್ಸಾಹ ನೀಡಿತು. ಉತ್ತಮ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಬಂಧಗಳನ್ನು ಪ್ರಕಟಿಸುವುದು ಉತ್ತಮ ಕಲಿಕೆಗೆ ಅವಕಾಶ ಮಾಡಿಕೊಡುತ್ತದೆ ಎಂದರು.
ಸಂಶೋಧನಾ ಲೇಖನಗಳನ್ನು ಉತ್ಕ್ರಷ್ಟವಾದ ನಿಯತಕಾಲಿಕಗಳಲ್ಲಿ ಪ್ರಕಟಗೊಳಿಸುವ ಅಭ್ಯಾಸ ಮಾಡಿಕೊಂಡಾಗ ಸಹಜವಾಗಿ ಉನ್ನತ ಮಟ್ಟದಲ್ಲಿ ಆಲೋಚನೆ ಮಾಡಲು ಸಹಾಯ ಮಾಡುತ್ತವೆ. ಅಲ್ಲದೇ, ಅಂತಹ ಉತ್ಕೃಷ್ಠ ನಿಯತಕಾಲಿಕಗಳ ಮೂಲಕ ವಿದ್ವತ್ಪೂರ್ಣ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ. ಸ್ಥಳೀಯ ಜ್ಞಾನವನ್ನು ಇಂದಿಗೂ ಪಾಶ್ಚಿಮಾತ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಅಳವಡಿಸಲು ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿದ್ದು ಅವುಗಳನ್ನು ಸಶಕ್ತವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೋ. ಗಣಪತಿ ಗೌಡ, ಸಂಶೋಧನೆಯು ಅಧ್ಯಾಪಕರಿಗೆ ತರಗತಿಗಳಲ್ಲಿ ತಂತ್ರಜ್ಞಾನದ ಅಳವಡಿಕೆ, ನಾವೀನ್ಯತೆ, ಸಕ್ರಿಯ ಕಲಿಕಾ ತಂತ್ರಗಳ ಮೂಲಕ ಜ್ಞಾನವನ್ನು ಒದಗಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಅಂತರಶಿಸ್ತೀಯ ವಿಷಯಗಳ ಅಧ್ಯಯನಕ್ಕೂ ಸಹಾಯ ಮಾಡುತ್ತದೆ. ಇಂದು ತರಗತಿಗಳ ಸ್ವರೂಪ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ಪರಿಣಾಮಕಾರಿ ಬೋಧನೆ ಮತ್ತು ತಂತ್ರಜ್ಞಾನಗಳ ಅಳವಡಿಕೆಗೂ ಹೆಚ್ಚಿನ ಪ್ರೋತ್ಸಾಹ ನೀಡುವಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಪ್ರೋ. ಯತೀಶ್, ಶೈಕ್ಷಣಿಕ ಬರವಣಿಗೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ ಮುಖ್ಯಸ್ಥೆ ಹಾಗೂ ಸಂಶೋಧನಾ ವೇದಿಕೆ ಸಂಚಾಲಕಿ ಡಾ. ಭಾರತಿ ಪ್ರಕಾಶ್, ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಎಂ.ಎನ್., ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ. ಜಯವಂತ್ ನಾಯಕ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಕರು, ಸಂಶೋಧನಾ ಅಭ್ಯರ್ಥಿಗಳು ಉಪಸ್ಥಿತರಿದ್ದರು.