ಮಂಗಳೂರು, ಫೆ.13: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧಕ್ರಮಕೈಗೊಳ್ಳಲು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಸಹಭಾಗಿತ್ವದಲ್ಲಿ ಸುಮಾರು 7.85 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಮಂಗಳಾದೇವಿ ಪ್ರಾಥಮಿಕ ಆರೋಗ್ಯಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ, ಸಿಬ್ಬಂದಿ ವಸತಿ ಗೃಹ, ಬಸ್ ಟರ್ಮಿನಲ್, ಉದ್ಯಾನವನ ಉದ್ಘಾಟನೆ ಇತ್ತೀಚೆಗೆ ನಡೆದಿದ್ದು, ಈ ಕಾರ್ಯಕ್ರಮದ ಬಗ್ಗೆ ತನಗೆ ಅಥವಾ ಸಚಿವರ ಕಚೇರಿಗೆ ಮಾಹಿತಿ ನೀಡಿರುವುದಿಲ್ಲ. ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದಕ್ಕೆಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಗುತ್ತಿಗೆ ನೌಕರರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆ ಮಾಡಲು ಸಚಿವರು ಸೂಚಿಸಿದ್ದಾರೆ.