ಮಂಗಳೂರು: ವಿಜಯವಾಣಿ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ ಗಿರೀಶ್ ಕೆ.ಎಲ್. ಅವರಿಗೆ ಶ್ರದ್ಧಾಂಜಲಿ ಸಭೆ ಬುಧವಾರ ಪತ್ರಿಕಾ ಭವನದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯ. ಹಲವು ಮಂದಿ ಪತ್ರಕರ್ತರು ಅಕಾಲಿಕವಾಗಿ ನಿಧನರಾಗುತ್ತಿರುವುದು ವಿಷಾದಕರ. ಅಗಲಿದ ಕುಟುಂಬಸ್ಥರ ಪರ ಸಂಘವು ಬೆನ್ನೆಲುಬಾಗಿ ನಿಲ್ಲಲಿದೆ ಎಂದರು.

ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮಾತನಾಡಿ, ಗಿರೀಶ್ ಕೆ.ಎಲ್. ಅವರು ಸಜ್ಜನ ಹಾಗೂ ಕೆಲಸದಲ್ಲಿ ಉತ್ತಮ ಅನುಭವ ಹೊಂದಿದ್ದರು. ಪತ್ರಕರ್ತರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಶೀಘ್ರದಲ್ಲೇ ಆರೋಗ್ಯ ಶಿಬಿರ ಏರ್ಪಡಿಸಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ವಿಜಯವಾಣಿ ಹಿರಿಯ ವರದಿಗಾರರಾದ ಹರೀಶ್ ಮೋಟುಕಾನ, ಶ್ರವಣ್ ಕುಮಾರ್ ನಾಳ, ಉಪಸಂಪಾದಕಿ ಇಂದಿರಾ ಕಾನಡ್ಕ ಮೊದಲಾದವರು ಅಗಲಿದ ಗಿರೀಶ್ ಅವರಿಗೆ ನುಡಿ ನಮನ ಸಲ್ಲಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು.