ಆಳದಿಂದ ಒತ್ತರಿಸಿ ಬರುವ ತುಮುಲಗಳನ್ನು ಸಹಿಸಿಕೊಳ್ಳುತ್ತೇನೆ,.. ನನ್ನ ಮಕ್ಕಳಲ್ಲವೇ !
ನನ್ನೆದೆಮೇಲೆ ಜೀವಿಸುವ ಪ್ರತಿಕ್ಷಣವು ಇಡುವ ಹೆಜ್ಜೆಗಳಿಗೆ ಸಂತಸದಿಂದ ಹೆಗಲಾಗುತ್ತೇನೆ,.. ನನ್ನ ಮಕ್ಕಳಲ್ಲವೇ !
ಋಣಭಾರ ತೀರಿ ಹೊರಟವೇಳೆ ಅಕ್ಕರೆಯಿಂದ ಮಡಿಲನ್ನೀಯುತ್ತೇನೆ ಚಿರಶಾಂತಿಗಾಗಿ,.. ನನ್ನ ಮಕ್ಕಳಲ್ಲವೇ !
ಋಣದಲ್ಲಿದ್ದೂ ನನ್ಮೇಲೆಸಗುವ ಅತ್ಯಾಚಾರವನ್ನೂ ಸಹಿಸಿಕೊಳ್ಳುತ್ತೇನೆ,.. ನನ್ನ ಮಕ್ಕಳಲ್ಲವೇ !
ಒಡಲಿಗಂಟಿಸುವ ವೃಕ್ಷಾವಶೇಷಗಳಿಗೆ ಚೈತನ್ಯ ತುಂಬಿ ನಿಮಗೆ ನೆರಳನ್ನೀಯುತ್ತೇನೆ,.. ನನ್ನ ಮಕ್ಕಳಲ್ಲವೇ !
ಗರ್ಭವನ್ನಿರಿಯುವ ಪ್ರತೀ ಬಾರಿಯು ನೋವನ್ನು ನುಂಗಿಕೊಳ್ಳುತ್ತೇನೆ, ನನ್ನ ಮಕ್ಕಳಲ್ಲವೇ !
ಅತಿರೇಕ ತಾರಕಕ್ಕೇರಿ ಸಹಿಸದಾದಾಗ ಸಿಡಿದು ನಿಲ್ಲುತ್ತೇನೆ ಕವಿದ ಮಂಕನ್ನು ಸರಿಸಿ ಎಚ್ಚರಿಸಲು,.. ನಾನು ತಾಯಿಯಲ್ಲವೇ..?!
ಸಕಲ ಚರಾಚರಗಳಿಗೆ ಆಶ್ರಯ ನೀಡಿದವಳೇ ಹೇಗೆ ನಿರ್ನಾಮಗೊಳಿಸಲಿ,.. ನಾನು ತಾಯಿಯಲ್ಲವೇ..?!
-ಪಲ್ಲವಿ ಚೆನ್ನಬಸಪ್ಪ