ಅಂದು ಅವಳ ಅಳುವು, ನಗುವು

ಒಟ್ಟಾದ ದಿನವೇನು ಗುಟ್ಟಾಗಿ ಉಳಿದಿರಲಿಲ್ಲ..! 

ಪುಟ್ಟ ಬಾಲನಾಗಮನಕೆ ನೆರೆದ

ಬಂಧು-ಬಾಂಧವರ ಮನದಿ

ಸಂಭ್ರಮದ ಹಾಲಗಡಲು..!! 


ನವಮಾಸ ಹೊತ್ತು ಬಳಲಿದೊಡಲಿನವಳು

ಹಡೆದ ನೋವನು ಕ್ಷಣ ಮಾತ್ರದಿ ಮರೆಯುವಳು

ತನ್ನ ಕರುಳ ಕುಡಿಯ ಕಿರುನಗುವ ಕಂಡು, 

ನೆತ್ತಿ ಸವರಿ ಮುದ್ದಾಡುತಾ.


ಕಂದನಳುವ ದನಿಗೆ ಕಿವಿಯಾಗುವಳು

ಅತಿ ಆಯಾಸವಿರಲೂ ಎದ್ದು ಕೂರುವಳು

ಹಸಿವಿನಿಂದಳುವ ಹವಳದ ತುಟಿಗಳಿಗೆ

ಎದೆ ತೆರೆದು ಜಗವ ಮರೆತವಳ ನಯನಗಳಲಿ

ಸುರಿದವು ಆನಂದ ಬಿಂದು..! 


ತರುಣಿಯವಳು ತಾಯಾದಳು

ತನ್ನಾಸೆ ಕನಸುಗಳನೆಲ್ಲ ಬದಿಗೆ ಸರಿಸಿ, 

ಮಡಿಲೊಳಗಾಡುವ ಕಂದನೇ ತನ್ನ ಜಗವೆನ್ನುತ

ಜೀವ, ಜೀವನವನೆ ಧಾರೆಯೆರೆವಳು...!! 


ಅಂಬೆಗಾಲಿಕ್ಕುತ ಬರುವ, ಅಡಿಗಡಿಗೆ 

ಅಡಿಗೆ ಮಾಡಲು ಬಿಡದೆ ಸೆರಗನೆಳೆದು 

ಕಾಡುವ ಕಂದನ ಎತ್ತಿ ಮುದ್ದಾಡುತ, 

ಚಂದಿರನ ತೋರಿ ತುತ್ತನಿತ್ತಳವಳು. 


ಮಮತೆ, ವಾತ್ಸಲ್ಯದ ಅಗಣಿತ ನಿಕ್ಷೇಪ

ತ್ಯಾಗದ ಪ್ರತಿ ಮೂರ್ತಿಯವಳು

ಪ್ರತೀ ಬಾರಿ ಬೇಡುವುದು ಕಂದನಿಗಾಗೆ

ಆ ದೇವನಲಿ, ಬದಲಾಗಿ ಬೇಡಳು ತನಗೇನನೂ...! 


ಬದುಕ ಬವಣೆಗಳು ನೂರೆಂಟು ಇರಲೂ... 

ತಾನೊಂದು ಅತ್ತರೂ ಒಳಗೊಳಗೆ

ಎಲ್ಲ ಮರೆಮಾಚುವಳು ನಗುವಿನೊಡವೆಯ

ಸಿಂಗರಿಸಿಕೊಳ್ಳುತಲಿ ಮೊಗಕೆ...!! 


ತನ್ನ ಮಡಿಲ ಕೂಸಿನ ನಗುವೆ ಒಡವೆಯೆನ್ನುವಳು

ಮುಕ್ಕೋಟಿ ದೇವರು ಹರಸಲೆನ್ನುತಲಿ ಹನಿಗಣ್ಣಾಗುವಳು.... 

ವ್ರತ, ಉಪವಾಸಗಳೆಲ್ಲ ಕೆಲವೊಮ್ಮೆ ಹಸಿದ ಒಡಲನು ಬಚ್ಚಿಡುವ ನೆಪವು...!! 

- ಸುಮತಪಸ್ವಿನಿ

ನರಸಿಂಹರಾಜ ಪುರ

ಚಿಕ್ಕಮಗಳೂರು