ಮೂಡುಬಿದಿರೆ ತಾಲೂಕಿನ ಪಾಲಡ್ಕ ಸಂತ ಇಗ್ನೇಶಿಯಸ್ ಶಿಕ್ಷಣ ಸಂಸ್ಥೆಗಳ ಪೋಷಕರು ವಿದ್ಯಾರ್ಥಿಗಳೊಂದಿಗೆ ಶಾಲಾ ಅಭಿವೃದ್ಧಿ ಸಮಿತಿಯ ಸಭೆ ಅಕ್ಟೋಬರ್ 29ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸೂರ್ಯ ಫೌಂಡೇಶನ್ ನ ದ.ಕ. ಜಿಲ್ಲಾ ಸಂಯೋಜಕ, ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜೊತೆ ಕಾರ್ಯದರ್ಶಿ, ಪತ್ರಿಕಾ ವರದಿಗಾರ ರಾಯಿ ರಾಜಕುಮಾರ ಮೂಡುಬಿದಿರೆ ಯವರು ಆಗಮಿಸಿದ್ದರು.
ತಮ್ಮ ಭಾಷಣದಲ್ಲಿ ಪೋಷಕರು ಹಾಗೂ ಮಕ್ಕಳು ಗ್ರಾಮೀಣ ಶಿಕ್ಷಣ ಸಂಸ್ಥೆಗಳಿಂದ ಅಭಿವೃದ್ಧಿಗೊಂಡು ಬೆಳಗುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇಂದಿನ ದಿನಗಳಲ್ಲಿ ಗ್ರಾಮೀಣ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳು ದೊರಕುತ್ತಿವೆ. ಸರಕಾರದಿಂದ ಉನ್ನತ ವ್ಯಾಸಂಗ ಮತ್ತು ಉದ್ಯೋಗದಲ್ಲಿ ಗ್ರಾಮೀಣ ಕೃಪಾಕ ದೊರೆಯುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳ ಪುಣ್ಯ ಎಂದು ಕೊಂಡಾಡಿದರು. ಅಲ್ಲದೆ ಪೋಷಕರು, ಮಕ್ಕಳ ಸಂಬಂಧ, ಪೋಷಕರು, ಶಿಕ್ಷಕರ ಜವಾಬ್ದಾರಿ ಹಾಗೂ ಹಳ್ಳಿ ಶಾಲೆಗಳಲ್ಲಿ ದೊರಕುತ್ತಿರುವ ಮಕ್ಕಳ ಸುರಕ್ಷತಾ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಹಲವಾರು ಉದಾಹರಣೆಗಳ ಮೂಲಕ ಮನವರಿಕೆ ಮಾಡಿಕೊಟ್ಟರು. ಕಳೆದ ಆರು ವರ್ಷಗಳಿಂದ ಸತತವಾಗಿ ನೂರು ಶೇಕಡ ಫಲಿತಾಂಶದ ಪ್ರಗತಿಯನ್ನು ಕಾಯ್ದುಕೊಂಡ ವಿದ್ಯಾಸಂಸ್ಥೆಯ ಹೆಸರನ್ನು ಉಳಿಸಲು ವಿದ್ಯಾರ್ಥಿಗಳನ್ನು ಕೇಳಿಕೊಂಡರು.
ವೇದಿಕೆಯಲ್ಲಿ ಶಾಲಾ ಸಂಚಾಲಕ ಫಾದರ್ ಎಲಿಯಾಸ್ ಡಿಸೋಜಾ, ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಗಲ್ಬಾವೋ, ಶಿಕ್ಷಕ ರಕ್ಷಕ ಸಂಘದ ರೊನಾಲ್ಡ್ ಲೋಬೋ, ಆಡಳಿತ ಮಂಡಳಿಯ ಓಲ್ ಹೋಲ್ಡ್ ಪಿಂಟೋ, ಅರ್ಥರ್ ಡಯಾಸ್, ಮೈಕಲ್ ಸಿಕ್ವೇರಾ, ರೆನಿಟಾ ಸೆರಾವೋ, ಎವ್ಜಿನ್ ಫೆರ್ನಾಂಡಿಸ್, ಮೆಟಿಲ್ಡಾ ಕರ್ಡೋಜಾ ಹಾಜರಿದ್ದರು. ಶಾಲಾ ಶಿಕ್ಷಕಿಯರಾದ ವೀಣಾ ಎನ್ ಸ್ವಾಗತಿಸಿದರು. ಚೇತನಾ ಕಾರ್ಯಕ್ರಮ ನಿರ್ವಹಿಸಿದರು. ಸಿಸ್ಟರ್ ಪ್ರಿಯಾ ವಂದನಾರ್ಪಣೆಗೈದರು.