ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಪ್ರತೀ ವರ್ಷ ನೂರಕ್ಕೆ ನೂರು ಶೇಕಡಾ ಫಲಿತಾಂಶ, ಉದ್ಯೋಗ ದೊರಕಿಸಿ ಕೊಟ್ಟ ಕೀರ್ತಿ ಪಡೆದಿರುವ ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶಿಸ್ತು, ಕಾರ್ಯದಕ್ಷತೆ ಹೊಂದಿದ್ದಾರೆ. ದೈಹಿಕ ಶಿಕ್ಷಣ ದೊಂದಿಗೆ ಯೋಗ ಶಿಕ್ಷಣವನ್ನೂ ಮೈಗೂಡಿಸಿಕೊಂಡು ಕರ್ನಾಟಕದ ಶಿಕ್ಷಕರು ದೇಶದೆಲ್ಲೆಡೆ ಖ್ಯಾತಿ ಪಡೆದಿದ್ದಾರೆ ಎಂದು ಮಾಜಿ ಸಚಿವ, ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಭಿನಂದಿಸಿದರು. ಅವರು ಜುಲೈ 12 ರಂದು ಎಂ.ಕೆ. ಅನಂತ್ರಾಜ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 

ವಿದ್ಯಾಲಯದ ಹಳೆವಿದ್ಯಾರ್ಥಿ, ಅಂತರ್ ರಾಷ್ಟ್ರೀಯ ಯೋಗ ತರಬೇತುದಾರ-ತೀರ್ಪುಗಾರ ನರೇಂದ್ರ ಕಾಮತ್ ದೀಪ ಬೆಳಗಿ ಉದ್ಘಾಟಿಸಿ ಸಾಧಕ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋದ ಸಂತೃಪ್ತಿ ಇದೆ ಎಂದರು. ವಿದ್ಯಾರ್ಥಿಗಳು ಹಕ್ಕಿಗಿಂತ, ಕರ್ತವ್ಯ, ನಾಯಕತ್ವಕ್ಕೆ ಆದ್ಯತೆ ನೀಡಬೇಕು ಎಂದು ಎಸ್.ಎನ್.ಎಂ.ಪಿ.ಕಾಲೇಜಿನ ಪ್ರಾಂಶುಪಾಲ ಜೆ.ಜೆ.ಪಿಂಟೋ ನುಡಿದರು. 

ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಪ್ರಾಂಶುಪಾಲ ಧನಂಜಯ ಶೆಟ್ಟಿ ಮಾತನಾಡಿ ಶಟಲ್, ಬ್ಯಾಡ್ಮಿಂಟನ್, ಕಬಡ್ಡಿ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ ಆಡಳಿತ ಮಂಡಳಿ ಹಾಗೂ ಅಭಯ ಚಂದ್ರ ಜೈನ್ ರಿಗೆ ಧನ್ಯವಾದ ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ ಅಂತರ್ ರಾಷ್ಟ್ರೀಯ ಯೋಗಪಟು ನರೇಂದ್ರ ಕಾಮತ್, ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಹಳೆವಿದ್ಯಾರ್ಥಿ ಮಂಗಳೂರು ಸಿ.ಸಿ.ಬಿ.ಯ ಸುಧೀರ್ ಕುಮಾರ್ ರನ್ನು ಸಂಮಾನಿಸಲಾಯಿತು. ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾಂಶುಪಾಲ ಧನಂಜಯ ಶೆಟ್ಟಿ ಅವರಿಗೆ ಗುರುವಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಕೋಶಾಧಿಕಾರಿ ರಾಮ್ ಪ್ರಸಾದ್, ಸದಸ್ಯ ವೆಂಕಟೇಶ್ ಕಾಮತ್, ಪಿ.ಯು. ಪ್ರಾಂಶುಪಾಲೆ ವಿಜಯಲಕ್ಷ್ಮಿ ಹಾಜರಿದ್ದರು. 

ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸುಮಲತಾ ಸ್ವಾಗತಿಸಿದರು. ರಂಜಿತ್ ಕಾರ್ಯಕ್ರಮ ನಿರ್ವಹಿಸಿದರು. ನಿಮಿಷಾ ಪ್ರಥಮ ವರ್ಷದ ವಿದ್ಯಾರ್ಥಿ ಪಟ್ಟಿಯನ್ನು, ಆಕಾಶ್ ಸಂಘದ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ನಿಧಿಶಾ ಶೆಟ್ಟಿ, ಸುಶ್ಮಿತಾ ಸಾಧಕರ ಪರಿಚಯ ಮಾಡಿದರು. ಶಿವಾನಿ ಧನ್ಯವಾದ ಸಲ್ಲಿಸಿದರು.