ಮುಂಬಯಿ, ಎ. 23: ಮುಂಬಯಿ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ಶ್ರೀ ನಾರಾಯಣ ಗುರುಗಳ ತತ್ವಶಾಸ್ತ್ರ 2023-24ನೇ ಶೈಕ್ಷಣಿಕ ಸಾಲಿನ ಸರ್ಟಿಫಿಕೇಟು ಕೋರ್ಸ್ ಪರೀಕ್ಷೆ ಇತ್ತೀಚೆ ನಡೆಸಲಾಗಿದ್ದು ಮುಂಬಯಿ ಅಲ್ಲಿನ ತುಳು-ಕನ್ನಡಿಗ ಹಿರಿಯ ಸಮಾಜ ಸೇವಕ ಜಗನ್ನಾಥ ಮದನ್ ಅವಿೂನ್ ಸರ್ಟಿಫಿಕೇಟು ಕೋರ್ಸ್‍ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದು ಡಿಪ್ಲೊಮಾ ಕೋರ್ಸ್‍ನಲ್ಲಿ ದ್ವಿತೀಯ ರ್ಯಾಂಕ್‍ಗೆ ಭಾಜನರಾಗಿದ್ದಾರೆ.
ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಕಳೆದ ಎ. 19ರ ಶುಕ್ರವಾರ ನಡೆದ ವಿಚಾರ ಸಂಕಿರಣದಲ್ಲಿ ವಿಭಾಗದ ಮುಖ್ಯಸ್ಥೆ ಡಾ| ಪ್ರಿಯಾ ಎಂ. ವೈದ್ಯ ಮತ್ತು ಶ್ರೀ ನಾರಾಯಣ ಗುರುಗಳ ತತ್ರಶಾಸ್ತ್ರ ಸರ್ಟಿಫಿಕೇಟು ಕೋರ್ಸ್‍ನ ಸಮನ್ವಯಕ ಡಾ| ನಾರಾಯಣ್ ಶಂಕರ್ ಗಡಾದ ಅವರು ಜಗನ್ನಾಥ್ ಅವಿೂನ್ ಅವರಿಗೆ ಪ್ರಶಸ್ತಿ, ಮಾನ್ಯತಾ ಪತ್ರ ಮತ್ತು ಅಂಕಪಟ್ಟಿ ಪ್ರದಾನಿಸಿ ಅಭಿನಂದಿಸಿದರು.
ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಮೂಲತಃ ಮದನ ಪೂಜಾರಿ ಮತ್ತು ಲಕ್ಷ್ಮೀ ಪೂಜಾರ್ತಿ ದಂಪತಿ ಸುಪುತ್ರ 82 ಹರೆಯದ ಜಗನ್ನಾಥ್ ಅವಿೂನ್ ಉಪ್ಪಳದಲ್ಲಿ ಬಾಲ್ಯ ಶಿಕ್ಷಣ ಪೂರೈಸಿ 1960ರಲ್ಲಿ ಮುಂಬಯಿಗೆ ಆಗಮಿಸಿ ಕನ್ನಡ ರಾತ್ರಿ ಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದರು. ಬಿಲ್ಲವ ಸಹಕಾರ ಭೂಷಣ, `ಬಿಲ್ಲವ ರತ್ನ' ಜಯ ಸಿ.ಸುವರ್ಣ ಅವರ ನಿಕಟವರ್ತಿ ಆಗಿದ್ದು ಕಳೆದ ಸುಮಾರು ಐದು ದಶಕಗಳಿಂದ ಪುಟ್ಟಪರ್ತಿ ಸತ್ಯಸಾಯಿ ಬಾಬಾ ಅವರ ಪ್ರಸಾಂತಿ ನಿಲಯ ಆಶ್ರಮದಲ್ಲಿ ಅರೆಕಾಲಿಕವಾಗಿ ಸೇವಾ ನಿರತರಾಗಿದ್ದಾರೆ.
ಯುಎಸ್‍ಎ ಅಲ್ಲಿ ನೆಲೆಯಾಗಿರುವ ಸುಪುತ್ರಿ, ಅಳಿಯ, ಮೊಮ್ಮಗಳನ್ನು ಕಾಣಲು ಸಂದರ್ಶಕರಾಗಿ ಅಮೇರಿಕಾಕ್ಕೆ ಹೋದಲ್ಲೂ ಓದುತ್ತಾ, ನಾರಾಯಣ ಗುರುಗಳ ಅಧ್ಯಯನದಲ್ಲೇ ಕಾಲ ಕಳೆದು ಪರೀಕ್ಷೆ ಬರೆದ ಹಿರಿಯ ನಾಗರೀಕರಾದ ಜಗನ್ನಾಥ್ ಅವಿೂನ್ ತತ್ವಶಾಸ್ತ್ರ ಪರೀಕ್ಷೆಯ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನದಲ್ಲಿ ಶ್ರೇಷ್ಠದರ್ಜೆಯೊಂದಿಗೆ ತೇರ್ಗಡೆಯಾದ ಸಾಧನೆಗೆ ಗಣ್ಯರನೇಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.