ಪುತ್ತೂರು: 'ಕೊರೊನೋತ್ತರ ಸಂದರ್ಭದಲ್ಲಿ ಜಗತ್ತು ಬದಲಾಗಿದೆ. ನಮ್ಮೊಳಗಿನ ಸಂಯಮ, ತಾಳ್ಮೆ, ಸಹನೆ ಎಲ್ಲವೂ ಕಳೆದುಹೋಗಿ ಕೇಳುವ, ಭಾವಿಸುವ ದಿನ ಮರೆಯಾಗುತ್ತಿರುವ ಕ್ಷಣದಲ್ಲಿ ನಮ್ಮ ಮನದೊಳಗೆ ತೇಜಸ್ವಿಯನ್ನು ಬಿತ್ತುವ ಕಾರ್ಯವಾಗಬೇಕಿದೆ' ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾl ನರೇಂದ್ರ ರೈ ದೇರ್ಲ ಅವರು ಹೇಳಿದರು. 

ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ನಡೆದ 'ಪೂರ್ಣಚಂದ್ರ ತೇಜಸ್ವಿ ಮತ್ತು ವಿದ್ಯಾರ್ಥಿ ಓದುಗರು' ಎಂಬ ವಿಷಯದ ಬಗ್ಗೆ ಅತಿಥಿ ಉಪನ್ಯಾಸವನ್ನು ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಪುಸ್ತಕದ ಓದಿನಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಅತೀ ಹೆಚ್ಚು ಯುವ ಜನರಿಂದ ಓದಲ್ಪಡುತ್ತಿರುವವರು ತೇಜಸ್ವಿಯೇ. ಮುಖವಾಡಗಳಿಲ್ಲದೆ ತಾನು ಹೀಗೆಯೇ ಬದುಕಬೇಕು ಎಂದು ಬಯಸಿದಂತೆ ಬದುಕಿದ ಯಾವುದೇ ಮಾದರಿಗಳಿಲ್ಲದೆ ಮಾದರಿಗೆ ಸಡ್ಡು ಹೊಡೆದು ಹೀಗೆಯೂ ಬದುಕಬಹುದು ಎಂದು ತೋರಿಸಿದ ಕನ್ನಡದ ಒಬ್ಬ ಪ್ರಮುಖ ಚಿಂತಕ ತೇಜಸ್ವಿ. ಪರಿಸರವನ್ನು ಅನುಭವಿಸಿ ಬರೆದ ತೇಜಸ್ವಿ ಯಾವ ಅಧಿಕಾರ, ಪ್ರಶಸ್ತಿ ಬಯಸದೆ ಬದುಕಿ ನೈತಿಕತೆ ಒದಗಿಸಿ ಕೊಟ್ಟವರು. ನೀವು ಒಳ್ಳೆಯ ಲೇಖಕರಾಗಬೇಕಾದರೆ ನಗರದ ಬಣ್ಣದ ಬಣ್ಣನೆಗೆ ಕಿವಿಗೊಡಬೇಡಿ. ಗ್ರಾಮದ ಮಾತುಗಳಿಗೆ ಕಿವಿಯಾಗಿ ಎಂದು ಅವರು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು 'ಕೊರೊನೋತ್ತರ ಅವಧಿಯಲ್ಲಿ ಕುಳಿತು ಏಕಾಗ್ರತೆಯಿಂದ ಕೇಳುವ ಸಾವಧಾನತೆಯಿಲ್ಲ. ಪ್ರಚೋದನೆ ಕೊಡುವ ವಸ್ತುವಿನತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾದ ಕಾರಣ ಪ್ರೇರಣೆ ಹುಟ್ಟಿಸುವ ವಸ್ತುವಿನ ಕಡೆಗಿನ ಆಸಕ್ತಿ ಕಡಿಮೆಯಾಗಿದೆ. ವಿದ್ಯಾರ್ಥಿಗಳು ದೊರಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು' ಎಂದು ಹೇಳಿದರು.  

ಕಾಲೇಜಿನ ಉಪ ಪ್ರಾಂಶುಪಾಲರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ| ವಿಜಯಕುಮಾರ ಮೊಳೆಯಾರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಬಿನೋಯ್ ವಿನಯ್ ಡಿಸೋಜಾ ಸ್ವಾಗತಿಸಿ, ಅವನಿ ಮತ್ತು ಬಳಗದವರು ಪ್ರಾರ್ಥಿಸಿ, ಪ್ರತೀಕ್ಷಾ ಕೆ ವಂದಿಸಿ, ಲಿಖಿತಾ ಪಿ ನಿರೂಪಿಸಿದರು.