ಗರ್ಭಿಣಿಯರಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ನೀಡುವ ಅಪೌಷ್ಟಿಕ ಆಹಾರ ಯೋಜನೆಯ ಮೊಟ್ಟೆ ಟೆಂಡರ್ ನಲ್ಲಿ ಅಕ್ರಮ ಎಸಗಿ ಹಣ ಮಾಡಲು ಹೊರಟಿರುವ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ರಾಜೀನಾಮೆಗೆ ಒತ್ತಾಯಿಸಿ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸೋಮವಾರ ನಗರದ ಮಲ್ಲಿಕಟ್ಟೆಯಲ್ಲಿ ಪ್ರತಿಭಟನೆ ನಡೆಸಿತು.
ಈ ವೇಳೆ ಎನ್.ಎಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ಪ್ರತಿಹಂತದಲ್ಲೂ ಭ್ರಷ್ಟಾಚಾರವನ್ನು ಬಂಡವಾಳವನ್ನಾಗಿಸಿದ ರಾಜ್ಯ ಬಿಜೆಪಿ ಸರ್ಕಾರ ಇಂದು ಗರ್ಭಿಣಿರು, ಅಪೌಷ್ಟಿಕ ಮಕ್ಕಳು ಹಾಗೂ ಬಾಣಂತಿಯರಿಗೆ ಕೊಡುವ ಮೊಟ್ಟೆಯಲ್ಲೂ ಬೃಹತ್ ಪ್ರಮಾಣದ ಲಂಚವನ್ನು ಪಡೆಯುವ ಮುಖಾಂತರ ಭ್ರಷ್ಟಾಚಾರವನ್ನು ಎಸಗಿದ್ದು, ದೇವರು ಕೂಡ ಕೆಟ್ಟ ಸರ್ಕಾರವನ್ನು ಮೆಚ್ಚುವುದಿಲ್ಲ ಎಂದರು.
ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ಮಾತನಾಡಿ, ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಈ ಕೆಟ್ಟಸರ್ಕಾರವನ್ನು ಕಿತ್ತೊಗೆಯುವ ಮುಖಾಂತರ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗದ ರಾಜ್ಯ ಮುಖಂಡ ಗಣೇಶ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ, ಎನ್.ಎಸ್.ಯು.ಐ ಜಿಲ್ಲಾ ಕಾರ್ಯಾಧ್ಯಕ್ಷ ಪವನ್ ಸಾಲ್ಯಾನ್, ಪದಾಧಿಕಾರಿಗಳಾದ ಶಾನ್ ಶಿರಿ, ಬಾತಿಷ್ ಅಳಕೆಮಜಲು, ಅಯಾಝ್ ಚಾರ್ಮಾಡಿ, ಶಫೀಕ್, ನಜೀಬ್ ಮಂಚಿ, ಅಹ್ನಾಫ್ ಡೀಲ್ಸ್, ನಿಖಿಲ್ ಶೆಟ್ಟಿ, ಫೈಝಲ್,ಪಯಾಝ್ ಅಮ್ಮೆಮಾರ್, ಶಕೀಲ್ ಉಳ್ಳಾಲ, ಕೀರ್ತನ್, ಸಲ್ಮಾನ್ ಫಾರಿಸ್, ಸಲ್ಮಾನ್, ಹಸನ್ ಫಳ್ನೀರ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.