ಬಿಜೆಪಿ ಸರಕಾರಗಳು ಕಾಂಗ್ರೆಸ್ ಕಾಲದ ಹೆಸರುಗಳನ್ನು ಬದಲಾಯಿಸುವ ಬದಲು ಹೊಸ ಯೋಜನೆ ರೂಪಿಸಿ ಅದಕ್ಕೆ ತಮ್ಮ ಹೆಸರು ಇಡಿ ಎಂದು ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಇಂದಿರಾ ಗಾಂಧಿಯವರು ಈ ದೇಶದ ದುರ್ಗೆ ಎಂದು ಆರೆಸ್ಸೆಸ್ ಜನರೇ ಕರೆದ ನಾಯಕಿ. ಇತಿಹಾಸ ತಿಳಿಯದ ರವಿ ಹೆಸರು ಬದಲಾವಣೆ ಬಗೆಗೆ ಮಾತನಾಡುವುದೇಕೆ. ರವಿಗೆ ಅಗತ್ಯವಿದ್ದರೆ ನಾವು ಇತಿಹಾಸದ ಪುಸ್ತಕಗಳನ್ನು ನಾವು ಕಳುಹಿಸುತ್ತೇವೆ ಎಂದು ಅವರು ಹೇಳಿದರು.
ಧ್ಯಾನ್ ಚಂದ್ ದೊಡ್ಡ ಹೆಸರು, ಆದರೆ ಅವರ ಹೆಸರು ಇಡಲು ರಾಜೀವ್ ಗಾಂಧಿಯವರ ಹೆಸರು ಏಕೆ ಬದಲಿಸಬೇಕು. ನಾವು ಆಳುತ್ತಿದ್ದಾಗ ಅಟಲ್ ಸಾರಿಗೆ ಇತ್ತು. ಅದನ್ನು ನಾವು ಬದಲಿಸಿದ್ದೇವಾ ಎಂದು ಡಿಸೋಜಾ ಪ್ರಶ್ನಿಸಿದರು.
ಮೋದಿಯವರ ಬಗೆಗೆ ಅಂತರರಾಷ್ಟ್ರೀಯವಾಗಿ ಸುಳ್ಳುಗಾರ ಎಂಬ ದೊಡ್ಡ ಹೆಸರು ಇದೆ. ಅವರು ಇನ್ನೊಮ್ಮೆ ಪ್ರಧಾನಿ ಆಗುವುದಿಲ್ಲ. ರಾಹುಲ್ ಗಾಂಧಿಯವರು ಪ್ರಧಾನಿ ಆಗುತ್ತಾರೆ. ಆಗ ನಾವು ಹೆಸರು ಬದಲಿಸುವ ಇವರ ಕೊಳಕು ರಾಜಕೀಯ ಮಾಡಬೇಕೆ? ಇಂದಿರಾ ಗಾಂಧಿಯವರ ಹೆಸರು ಬದಲಾವಣೆ ಮಾಡಿದರೆ ರಸ್ತೆ ರಸ್ತೆಗಳಲ್ಲಿ ಪ್ರತಿಭಟನೆ ಆಗುತ್ತದೆ ಎಂದು ಅವರು ಹೇಳಿದರು.
ಇಂದಿರಾ ಕುಟುಂಬ ದೇಶಕ್ಕೆ ಸೇವೆ ಮಾಡಿದ, ಬಲಿದಾನವಾದ ಕುಟುಂಬ. ರವಿ ಹಿನ್ನೆಲೆ ಏನು? ಏನಾದರೂ ಹೋರಾಟ ಇದೆಯೇ? ಇಷ್ಟೊಂದು ಕೋಟಿ ಹೇಗೆ ಮಾಡಿದರು ಎಂದು ಅವರು ಕೇಳಿದರು.
ಮತ್ತೂ ಮುಂದುವರಿದು ಕಾನೂನು ಬಾಹಿರವಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ಇಟ್ಟಿದ್ದಾರೆ. ಕೋರ್ಟ್ ಆದೇಶ ಇದ್ದರೂ ಆ ಹೆಸರು ಬದಲಿಸುವ ಯೋಗ್ಯತೆ ಬಿಜೆಪಿಗೆ ಇಲ್ಲ. ಮಂಗಳೂರಿನವರಿಗೆ ಮುಂಬಯಿ, ದುಬಾಯಿ, ತಿರುಪತಿ ಮೊದಲಾದ ಜಾಗಗಳಿಗೆ ವಿಮಾನ ಬೇಕಾಗಿದೆ. ಯಾವ ಯಾವುದೋ ಊರು, ದೇಶ ಸುತ್ತಿ ಹೋಗಬೇಕೆ ಎಂದು ಐವಾನ್ ಡಿಸೋಜಾ ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಇವರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರಿಗೆ ಮುಖ್ಯಮಂತ್ರಿ ಬಂದು ಎಚ್ಚರಿಸಬೇಕು. ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತ ಸರಿಯಾಗಿ ಚಿಕಿತ್ಸೆ ಕೊಡಲು ವಿಫಲವಾಗಿರುವುದು ಜಿಲ್ಲೆಯಲ್ಲಿ ಕೊರೋನಾ ಸಾವುಗಳು ಆಗಲು ಕಾರಣ. ಕೂಡಲೆ ಸತ್ತವರ ಮನೆಗೆ ಐದು ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಾವು ಕಾನೂನು ರೀತ್ಯಾ ಪರಿಹಾರ ಪಡೆಯಲು ಪ್ರಯತ್ನ ಮಾಡಬೇಕು ಎಂದು ಡಿಸೋಜಾ ಒತ್ತಾಯಿಸಿದರು.
ಮಾಜೀ ಮೇಯರ್ ಶಶಿಧರ ಹೆಗ್ಡೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.