ಮಂಗಳೂರು: ಪಂಪ್‌ವೆಲ್‌ನಲ್ಲಿ ವಾರಸುದಾರರಿಲ್ಲದೆ ಸಿಕ್ಕಿದ ನಿಗೂಢ ಹಣದಲ್ಲಿ ಒಟ್ಟು ರೂ. 3,48,500 ನಮ್ಮ ಕಚೇರಿಗೆ ದೊರೆತಿದ್ದು, ವಾರಸುದಾರರು ಇದ್ದಲ್ಲಿ, ಸೂಕ್ತ ಮಾಹಿತಿ ಒದಗಿಸಿದರೆ ಹಣ ದೊರೆಯಲು ದಾರಿ ಮಾಡಲಾಗುವುದು ಎಂದು ಪೋಲೀಸು ಕಮಿಶನರ್ ಎನ್. ಶಶಿಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಶಿವರಾಜ್ ಎಂಬ ಮೆಕಾನಿಕ್‌ಗೆ ನವೆಂಬರ್ 26ರ ಮುಂಜಾವ ಪಂಪವೆಲ್ ಬಸ್ ನಿಲ್ದಾಣದ ಬಳಿ ಹಣದ ಕಟ್ಟಿನ ಗಂಟು ಸಿಕ್ಕಿದೆ. ಅದರಲ್ಲಿ ಒಂದು ಸಾವಿರ ತೆಗೆದು ಕುಡಿದ ಆತನು ಕುಡಿತದ ಗೆಳೆಯ ತುಕಾರಾಂಗೆ ವಿಷಯ ಹೇಳಿದ್ದಾನೆ. ನನಗೇನೂ ಇಲ್ಲವಾ ಎಂದ ಆತನಿಗೆ ಶಿವರಾಜ್ ಆರು ಕಟ್ಟು ನೀಡಿದ್ದಾಗಿ ಹೇಳಿದ್ದಾನೆ. ಪತ್ರಿಕೆಗಳಲ್ಲಿ ವಿಷಯ ವರದಿಯಾದ ಬೆನ್ನಿಗೆ ತುಕರಾಂ ತಾನು ಪಡೆದ ಹಣ ಪೋಲೀಸರಿಗೆ ಒಪ್ಪಿಸಿದ್ದಾನೆ. 500 ರೂಪಾಯಿ ತೆಗೆದು ಕುಡಿದಿದ್ದೇನೆ ಹೊರತು ಬೇರೆ ತೆಗೆದಿಲ್ಲ ಎಂದು ಅವನು ಹಿಂತಿರುಗಿಸಿದ ಕಟ್ಟುಗಳಲ್ಲಿ 2,99,500 ರೂಪಾಯಿ ಇದ್ದವು. ಶಿವರಾಜ್‌ನಿಂದ ಪಡೆದ ಹಣ 49,000 ಸೇರಿ ಈಗ 3,48,500 ಹಣ ಸಿಕ್ಕಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು.
ಶಿವರಾಜ್ ಕುಡಿದು ಮಲಗಿದ್ದಾಗ ಆತ ಕುಡಿಯಲು ಒಂದು ಸಾವಿರ ತೆಗೆದ ಕಟ್ಟು ಬಿಟ್ಟು ಬೇರೆ ಕಟ್ಟು ಕಳವಾಗಿರುವುದಾಗಿ ಹೇಳಿದ್ದಾನೆ. ಹಣ ತೆಗೆದವರು ಇಲ್ಲವೇ ಸಿಕ್ಕಿದವರು ತಂದು ಒಪ್ಪಿಸಿದರೆ ಕ್ರಮವಿಲ್ಲ. ತನಿಖೆಯಿಂದ ಪತ್ತೆಯಾದರೆ ದರೋಡೆ ಪ್ರಕರಣವಾಗುತ್ತದೆ. ಶಿವರಾಜ್, ತುಕಾರಾಂ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದೂ ಕಮಿಶನರ್ ತಿಳಿಸಿದರು.