ಕನ್ನಡ ಚಿತ್ರರಂಗದ ನಂಬರ್ ಒನ್ ಸ್ಥಾನವನ್ನು ನಿಧನರಾದ ಬಳಿಕವೂ ಉಳಿಸಿಕೊಂಡಿರುವ ನಟಸಾರ್ವಭೌಮ ದಿವಂಗತ ರಾಜಕುಮಾರ್ ಅವರ ಕೊನೆಯ ಮಗ ಪುನೀತ್ ರಾಜ್‍ಕುಮಾರ್ ತಮ್ಮ 46ನೇ ವಯಸ್ಸಿನಲ್ಲಿ ನಿಧನರಾದರು.

ಇಬ್ಬರು ಅಣ್ಣಂದಿರು ಇಬ್ಬರು ಅಕ್ಕಂದಿರ ಬಳಿಕ ಕೊನೆಯ ಕಂದ ಎನಿಸಿದ‌್ದ ಅಪ್ಪು ಇಷ್ಟು ಬೇಗ ಬಾರದ ಲೋಕಕ್ಕೆ ತೆರಳುವರೆಂದು ಯಾರೂ ಎಣಿಸಿರಲಿಲ್ಲ.

ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಅವರಿಗಿಂತ ಮೊದಲೇ ಬಾಲ ನಟನಾಗಿ ಅಪ್ಪು, ಲೋಹಿತ್, ಅನಂತರದ ಪುನೀತ್ ರಾಜ್‍ಕುಮಾರ್ ಪ್ರಸಿದ್ಧರಾಗಿದ್ದರು. ಬೆಟ್ಟದ ಹೂ ಚಿತ್ರದ ಅಭಿನಯಕ್ಕಾಗಿ ಬಾಲಕನಿದ್ದಾಗಲೇ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಈ ನಟ ಮುಂದೆ ನಾಯಕನಾಗಿಯೂ ಯಶಸ್ಸು ಗಳಿಸಿದ್ದರು. ಅವರ ಹೆಚ್ಚಿನ ಚಿತ್ರಗಳು ಸಾಮಾಜಿಕ ಸಮಸ್ಯೆಗಳ ಧ್ಯೇಯ ಹೊಂದಿ ಬರುತ್ತಿದ್ದವು.

ನಿರ್ದೇಶಕನಾಗಬೇಕು, ಅಣ್ಣ ಶಿವರಾಜ್ ಕುಮಾರ್ ಚಿತ್ರ ಮೊದಲು ನಿರ್ದೇಶಿಸಬೇಕು, ತಂದೆ ರಾಜ್ ಕುಮಾರ್ ಅವರ ಜೀವನ ಚರಿತ್ರೆ ಚಿತ್ರವಾಗಿಸಬೇಕು ಎಂಬಿತ್ಯಾದಿ ಗುರಿ ಹೊಂದಿದ್ದ ಅವರು ತೆರಳಿ ಬಿಟ್ಟರು. ಹೆಂಡತಿ, ಇಬ್ಬರು ಹೆಣ್ಣು ಮಕ್ಕಳನ್ನು, ಕುಟುಂಬದವರನ್ನು ಅವರು ಅಗಲಿದ್ದಾರೆ.