ಮಂಗಳೂರು: ನಮ್ಮ ರಾಷ್ಟ್ರ ಧ್ವಜದಲ್ಲಿ, ನಮ್ಮ ಕಾಂಗ್ರೆಸ್ ಪಕ್ಷದ ಬಾವುಟದಲ್ಲಿ ಕೇಸರಿ ಬಣ್ಣಗಳು ಇರುವುದರಿಂದ ನಮಗೆ ಆ ಬಣ್ಣದ ಬಗೆಗೆ ಬಹಳ ಗೌರವ ಇದೆ. ಆದರೆ ಬಜರಂಗ ದಳ ಮತ್ತು ಸಂಘ ಪರಿವಾರದ ಜನ ಕೇಸರಿ ಬಟ್ಟೆ ತೊಟ್ಟು ಗೂಂಡಾಗಿರಿ ನಡೆಸಿ ಅದರ ಗೌರವ ತಗ್ಗಿಸಿದ್ದಾರೆ. ಬಿಜೆಪಿ ಜನರು ಕೇಸರಿ ಬಣ್ಣ ಕೆಡಿಸಿರುವುದು ರಾಜಕೀಯಕ್ಕಾಗಿ ಎಂದು ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ಅವರು ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಸುರತ್ಕಲ್ ನಲ್ಲಿ ಬಜರಂಗ ದಳದ ಮಹಿಳೆಯೊಬ್ಬಳು ನಾವು ಗೂಂಡಾಗಿರಿ ಮಾಡುತ್ತೇವೆ, ಅನೈತಿಕ ಪೋಲೀಸ್‌ಗಿರಿ ಮಾಡುತ್ತೇವೆ ಎಂದು ಹೇಳಿದರು. ನಾನು ಅದನ್ನು ಖಂಡಿಸಿದ್ದೇನೆ. ಕಾಪುನಲ್ಲಿ ಪೋಲೀಸರು ಕೇಸರಿ ಧರಿಸಿ ಆಯುಧ ಪೂಜೆ ನಡೆಸಿದ್ದನ್ನು ಖಂಡಿಸಿದ್ದೇನೆ. ಅಂಥವರ ವಿರುದ್ಧ ಹೋಗದೆ, ಬಜರಂಗ ದಳದವರು ನನ್ನ ಮನೆಯ ಎದುರು ಪ್ರತಿಭಟನೆ ನಡೆಸಿದ್ದು ಏಕೆ ಎಂದು ಐವಾನ್ ಕೇಳಿದರು.
ಸ್ವಾಮೀಜಿಯವರು ಒಬ್ಬರು ನನ್ನ ಸಂಸಾರದ ಬಗೆಗೆ ಕೆಣಕಿದ್ದಾರೆ. ನಾನು ಹಿಂದೂ ಹೆಣ್ಣನ್ನು ಮದುವೆಯಾಗಿದ್ದೇನೆ. ಅದರಿಂದ ಯಾರಿಗೆ ತೊಂದರೆ ಆಗಿದೆ. ಹೇಳಿ. ಮದುವೆ ಆಗಲು, ಧರ್ಮದ ಆಚರಣೆಗೆ ಸಂವಿಧಾನದ ರಕ್ಷಣೆ ಇದೆ. ಆದ್ದರಿಂದ ಅದರಲ್ಲಿ ಅಕ್ರಮ ಏನಿದೆ ಎಂದು ಐವಾನ್ ಡಿಸೋಜಾ ಅವರು ಕೇಳಿದರು.
ಚೈತ್ರಾ ಕುಂದಾಪುರ ಅವರ ದ್ವೇಷ ಭಾಷಣದ ಬಗೆಗೆ ಪ್ರತಿಭಟನೆ ಮಾಡದ ಇವರು ಯಾವ ಧರ್ಮ ರಕ್ಷಣೆ ಮಾಡುತ್ತಾರೆ? ನಮ್ಮ ಕ್ರಿಶ್ಚಿಯನ್ ಧರ್ಮ ಗುರುಗಳು ಸಹ ಕೇಸರಿ ಬಟ್ಟೆ ಧರಿಸುತ್ತಾರೆ. ಅದರ ಬಗೆಗೆ ನಮಗಿದ್ದ ಗೌರವವನ್ನು ಅವರು ಕಡಿಮೆ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಐವಾನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ಮಲ್ಲಿ, ರಮೇಶ್ ಪೂಜಾರಿ, ವಿಶಾಲ್, ಕಳ್ಳಿಗೆ ತಾರಾನಾಥ ಶೆಟ್ಟಿ, ಪುನೀತ್, ಆಲಿಸ್ಟರ್, ಸುಹಾನ್ ಮೊದಲಾದವರು ಉಪಸ್ಥಿತರಿದ್ದರು.