ಕುಮಟಾ: ಕೊಂಕಣಿ ಜನಾಂಗ ಮತ್ತು ಭಾಷೆ ತಮ್ಮ ಕಾರ್ಯವಿಶೇಷತೆಗಳಿಂದ ಪ್ರಪಂಚಕ್ಕೆ ದಾರಿದೀಪವಾಗುವಂತೆ ಕೆಲಸ ಮಾಡಿದೆ. ರಾಷ್ಟ್ರೀಯತೆಯನ್ನು ಉದ್ಭವಿಸುವಂಥ ವ್ಯವಸ್ಥೆಯಾಗಿಯೂ ಸಮಾಜದಲ್ಲಿ ಮಹತ್ವದ ಕೆಲಸ ಮಾಡಿದೆ. ಕೊಂಕಣಿ ಜನಾಂಗ ಮತ್ತು ಭಾಷಿಕರೆಲ್ಲರೂ ಒಂದು ಕುಟುಂಬದಂತೆ ಬದುಕುವ ಕಲ್ಪನೆ ಜಾರಿಯಲ್ಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಪಟ್ಟಣದ ಮೂರುಕಟ್ಟೆಯ ಮಹಾಲಸಾ ಕಲಾಕ್ಷೇತ್ರದಲ್ಲಿ ಭಾನುವಾರ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ವೈದ್ಯಕೀಯ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೊಂಕಣಿ ಭಾಷಿಕರ ಸಾಧನೆ ದೊಡ್ಡದು. ಮಣಿಪಾಲದ ಕೆಎಂಸಿಗೆ ವಿಶ್ವದ ಮೂಲೆಗಳಿಂದ ವಿದ್ಯಾರ್ಥಿಗಳು ಹುಡುಕಿ ಬರುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕರ ದೇಸಾಯಿ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಹೆಸರು, ಶಕ್ತಿಯನ್ನು ತಂದುಕೊಟ್ಟು ಮನೆಮಾತಾಗಿದ್ದು ಇತಿಹಾಸ. ಅನೇಕ ಕೊಂಕಣಿ ಭಾಷಿಕ ಕಲಾವಿದರು ಮತ್ತು ಲೇಖಕರು, ವಿಮರ್ಶಕರು ತಮ್ಮದೇ ಆದ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ ಎಂದರು.  

ಶಾಸಕ ದಿನಕರ ಶೆಟ್ಟಿ ಅಕಾಡೆಮಿ ಅಕಾಡೆಮಿಯ 6 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಭಾಷೆಯ ಬೆಳವಣಿಗೆಗೆ ಅಭಿಮಾನ ಮುಖ್ಯ.  ರಾಜ್ಯದಲ್ಲಿ ಭಾಷಾ ಅನ್ಯೋನ್ಯತೆ ವಿಶೇಷವಾಗಿದೆ. ಕೊಂಕಣಿ ಭಾಷಿಕರು ಕೂಡಾ ಇತರ ಭಾಷಿಕರೊಂದಿಗೆ ನಾಡಿನಲ್ಲಿ ಅನೋನ್ಯತೆಯಿಂದ ಇದ್ದಾರೆ. ಇನ್ನಷ್ಟು ಸಾಧನೆಗಳಾಗಲಿ ಎಂದರು. 

ಅಕಾಡೆಮಿಯ ಸಂಚಾಲಕ ಸದಸ್ಯ ಚಿದಾನಂದ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ವಿವಿಧ ಧರ್ಮಗಳ 42 ಕ್ಕೂ ಹೆಚ್ಚು ಪಂಗಡಗಳಲ್ಲಿ ಚಾಲ್ತಿಯಲ್ಲಿರುವ ಕೊಂಕಣಿ ಭಾಷಿಕರು ಕನ್ನಡ ನಾಡಿಗೆ ಎಂದೆಂದೂ ಉಪಕೃತರಾಗಿ ಸಹಬಾಳ್ವೆಯಡಿ ಬೆರೆತು ಬದುಕಿದ್ದಾರೆ. ನಾಡಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಜಗದೀಶ ಪೈ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಅನುರಾಧಾ ಬಾಳೇರಿ, ಕೊಂಕಣಿ ಪರಿಷತ್ ಉಪಾಧ್ಯಕ್ಷ ಮುರಲೀಧರ ಪ್ರಭು, ಮಾಳಸಾ ನಾರಾಯಣೀ ದೇವಸ್ಥಾನ ಅಧ್ಯಕ್ಷ ಎಂ.ಬಿ.ಪೈ ಉಪಸ್ಥಿತರಿದ್ದರು. 

ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಸಾಹಿತ್ಯಕ್ಕಾಗಿ ನಾಗೇಶ ಅಣ್ವೇಕರ, ಕಲೆಗಾಗಿ ದಿನೇಶ ಪ್ರಭು ಕಲ್ಲೊಟ್ಟೆ, ಜಾನಪದಕ್ಕಾಗಿ ಮಾಧವ ಖಾರ್ವಿ ಪಡೆದರೆ, ಸಾಹಿತ್ಯಕ್ಕಾಗಿ ಫಾ. ಜೊವಿನ್ ವಿಶ್ವಾಸ್, ಗೋಪಾಲಕೃಷ್ಣ ಪೈ, ಎಚ್. ಎಂ. ಪೆರ್ನಾಲ್ ಅವರು ಬಹುಮಾನ ಸ್ವೀಕರಿಸಿದರು.

ಬಳಿಕ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ, ಗಾಬೀತ ಸಮಾಜದ ಮಹಿಳೆಯರಿಂದ ಪುಗಡಿ ನೃತ್ಯ, ಸುಗಮ ಸಂಗೀತ, ಜಾನಪದ ನೃತ್ಯ, ಶ್ರೀತುಳಸಿ ವಿವಾಹ ಕುರಿತು ರೂಪಕ ಪ್ರದರ್ಶನ ನಡೆಯಿತು.  

ಅಕಾಡೆಮಿಯ ಸದಸ್ಯ ಗೋಪಾಲಕೃಷ್ಣ ಭಟ್ಟ ನಿರ್ವಹಿಸಿದರು. ಇತರ ಸದಸ್ಯರಾದ ನವೀನ ನಾಯಕ್, ಡಾ. ವಸಂತ ಬಾಂದೇಕರ, ಕುಂದಾಪುರ ನಾರಾಯಣ ಖಾರ್ವಿ, ಸಾಣೂರು ನರಸಿಂಹ ಕಾಮತ್, ಗುರುಮೂರ್ತಿ ಬಿ. ಶೇಟ್ , ಚಿದಾನಂದ ಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ . ಪಾಲನಕರ್, ಪ್ರಮೋದ ಶೇಟ್, ಪೂರ್ಣಿಮಾ ಸುರೇಶ ನಾಯಕ್, ಅರುಣ ಜಿ . ಶೇಟ್, ರಿಜಿಸ್ಟ್ರಾರ್ ಆರ್. ಮನೋಹರ ಕಾಮತ್ ಇನ್ನಿತರರು ಇದ್ದರು.

ಸಿಬ್ಬಂದಿ ವರ್ಗ ಮೇರಿ ಡಿ'ಸಿಲ್ವಾ, ಸುರೇಶ ಗೌಡ, ಕೆ. ವಿ. ಸೂರ್ಯಕಲಾ ಸಹಕರಿಸಿದರು