ಬಂಟ್ವಾಳ:  ಅಸುರಕ್ಷಿತ ಮತ್ತು ಅನೈತಿಕ ಜೀವನ ಶೈಲಿಯಿಂದ ಹರಡುವ ಮಾರಣಾಂತಿಕ ರೋಗ ಏಡ್ಸ್‍ನ್ನು ಸುರಕ್ಷಿತ ಜೀವನ ಕ್ರಮದಿಂದ ತಡೆಗಟ್ಟಬಹುದು ನೈತಿಕಮೌಲ್ಯ, ಸಂಸ್ಕ್ರತಿಯೊಳಗೆ ನಾವು ಜೀವನ ನಡೆಸುತ್ತಾ ಹೋದರೆ, ಜೀವನದಲ್ಲಿ ದಾರಿತಪ್ಪಲು ಸಾಧ್ಯವಿಲ್ಲ. ಮೊದಲು ನಮ್ಮಮೇಲೆ ನಮಗೆ ವಿಶ್ವಾಸವಿರಬೇಕು. ಈ ನೆಲೆಯಲ್ಲಿ ಯುವಕರು ಜಾಗೃತರಾಗಬೇಕು ಎಂದು ಮಂಗಳೂರಿನ ನಿವೃತ್ತ ಆರೋಗ್ಯ ಮೇಲ್ವಿಚಾರಕಾರದ  ಜಯರಾಮ ಪೂಜಾರಿ ನುಡಿದರು. 

ಅವರು ಎಸ್.ವಿ.ಎಸ್. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಮತ್ತು ರೆಡ್‍ರಿಬ್ಬನ್ ಕ್ಲಬ್‍ಗಳ ಆಶ್ರಯದಲ್ಲಿ ವಿಶ್ವ ಏಡ್ಸ್‍ ದಿನದ ಅಂಗವಾಗಿ ನಡೆದ ಏಡ್ಸ್ ಜಾಗೃತಿ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ ಡಿ.ಎಮ್. ವಹಿಸಿ, ವಿದ್ಯಾರ್ಥಿಗಳು ಯಾವುದೇ ಐಶಾರಾಮಿ ಬದುಕಿಗೆ ಮಾರುಹೋಗದೇ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಆರೋಗ್ಯವನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು ಇವತ್ತಿನ ದಿನದಲ್ಲಿ ಬಹುಮುಖ್ಯ. ರಾಷ್ಟ್ರೀಯ ಸೇವಾಯೋಜನೆಯ ಮೂಲಕ ಇಂತಹ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು. 

ರಾಷ್ಟ್ರೀಯ ಸೇವಾಯೋಜನೆ ಘಟಕ 1ರ ಕಾರ್ಯಕ್ರಮಾಧಿಕಾರಿ ಡಾ. ಕಾಶೀನಾಥ ಶಾಸ್ತ್ರಿ ಹೆಚ್.ವಿ. ಸ್ವಾಗತಿಸಿ, ಘಟಕ 2ರ ಕಾರ್ಯಕ್ರಮಾಧಿಕಾರಿ ಕಿಟ್ಟು ರಾಮಕುಂಜ ವಂದಿಸಿ, ಸಹಯೋಜನಾಧಿಕಾರಿಗಳಾದ ಆಶ್ರಿತಾ ಹಾಗೂ ಸಂಪ್ರೀತಾ ಸಹಕರಿಸಿದರು. ಸ್ವಯಂಸೇವಕಿ ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು.