ಮಂಗಳೂರು: ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆ. ಏಳು ವರುಷಗಳಿಂದ ನಮ್ಮ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂಪಾಯಿಗಳ ಸಹಾಯ ಮಾಡಿದೆ ಎಂದು ಬಿರುವೆರ್ ಕುಡ್ಲ ಸಂಚಾಲಕ ಲಕ್ಷ್ಮೀಶ್ ಹೇಳಿದರು.

ಮಂಗಳೂರಿನ ಒಂದು ಸಭೆಯಲ್ಲಿ ಶರಣ್ ಪಂಪ್‌ವೆಲ್ ಅವರು ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ. ಅಲ್ಲದೆ ನಮ್ಮ ಸಭೆಯೊಂದರಲ್ಲಿ ಮುಸ್ಲಿಂ  ಯುವಕನೊಬ್ಬ ಪಾಲ್ಗೊಂಡಿದ್ದ ಎಂಬ ಕಾರಣಕ್ಕಾಗಿ ಆತನನ್ನು ಅಟ್ಟಿಸಿಕೊಂಡು ಹೋದವರಿದ್ದಾರೆ. ಶರಣ್ ಪಂಪ್‌ವೆಲ್ ಅವರು ಬಿರುವೆರ್ ಕುಡ್ಲದ ಬಗೆಗೆ ಮಾನಹಾನಿ ಮಾತನಾಡಿರುವುದರಿಂದ ಅವರ ವಿರುದ್ಧ ಬಿರುವರ್ ಕುಡ್ಲ ಕಾನೂನು ಹೋರಾಟ ನಡೆಸಲಿದೆ ಎಂದು ಲಕ್ಷ್ಮೀಶ್ ಅವರು ಹೇಳಿದರು.

ನಾವು ನಾರಾಯಣ ಗುರುಗಳ ದಾರಿಯಲ್ಲಿ ನಡೆಯುವವರು. ಇಲ್ಲಿ ಜಾತಿಗೆ ಅವಕಾಶವೇ ಇಲ್ಲ ಎಂದು ಕೂಡ ಅವರು ಹೇಳಿದರು.

ಬಿರುವೆರ್ ಕುಡ್ಲದ ದೀಪು  ಶೆಟ್ಟಿಗಾರ್ ಅವರು ಮಾತನಾಡಿ ಶರಣ್ ಪಂಪ್‌ವೆಲ್ ಅವರು ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಕೇಂದ್ರಗಳಿಂದ ಹಣ ಸಂಪಾದಿಸುತ್ತಿದ್ದಾರೆ. ಇವರಿಗೆ ಹಿಂದೂ ಹೆಸರಿನಲ್ಲಿ ಮುಸ್ಲಿಮರ ಸಂಸ್ಥೆಯ ಹಣ ಆಗುತ್ತದೆ, ಮುಸ್ಲಿಂ ಯುವಕ ಸಭೆಗೆ ಬಂದರೆ ತಪ್ಪಾಗುತ್ತದೆಯೇ ಎಂದು ಶೆಟ್ಟಿಗಾರ್ ಪ್ರಶ್ನಿಸಿದರು.

ನಾವು ಹೆಣ ಹೊರುವುದರಿಂದ ಹಿಡಿದು ಮನೆ ಕಟ್ಟಿ ಕೊಡುವ ವರೆಗೆ ಜನ ಸೇವೆ ಮಾಡಿದ್ದೇವೆ. ಬಲ್ಲಾಳ್ ಬಾಗ್ ನಲ್ಲಿ ಬಿರುವೆರ್ ಕುಡ್ಲ ಜನ ಸಂಘಟನೆ ಮಾಡಿದೆಯೇ ಹೊರತು ಶರಣ್ ಪಂಪ್‌ವೆಲ್‌ರಂತೆ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಶರಣ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಿಶೋರ್ ಬಾಬು, ವಿದ್ಯಾ, ರಾಕೇಶ್, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.