ಬೆಂಗಳೂರು: ಬೆಂಗಳೂರುನ ಮಲ್ಲತ್ತಹಳ್ಳಿಯಲ್ಲಿ ಅಲ್ಲಿನ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ಕಳೆದ ಶನಿವಾರ (ಸೆ.20) ಸಂಜೆ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ತಿಂಗಳ ನಾಟಕ ಸಂಭ್ರಮದಡಿಯಲ್ಲಿ ನಡೆಸಿದ ನಾಟಕ ಪ್ರದರ್ಶನದಲ್ಲಿ ಮುಂಬಯಿಯ ಕನ್ನಡ ಕಲಾ ಕೇಂದ್ರವು ಲೈಂಗಿಕ ಅಲ್ಪಸಂಖ್ಯಾತರ ಬದುಕಿನ ಕುರಿತ ವಿಭಿನ್ನ ರೀತಿಯ `ಚೌಕಟ್ಟಿನಾಚೆಯ ಚಿತ್ರ' ನಾಟಕವನ್ನು ಪ್ರಸ್ತುತಪಡಿಸಿತ್ತು.
ನಾಟಕದ ಬಳಿಕ ಕರ್ನಾಟಕ ನಾಟಕ ಅಕಾಡೆಮಿಯು ಕನ್ನಡ ಕಲಾ ತಂಡದ ನಾಟಕಕಾರ, ನಿರ್ದೇಶಕ ಸಾ.ದಯಾ ಹಾಗೂ ಅವರ ಕಲಾವಿದರೊಂದಿಗೆ ಲೈಂಗಿಕ ಅಲ್ಪ ಸಂಖ್ಯಾತರ ಬಿಕ್ಕಟ್ಟು, ಅವಮಾನಗಳನ್ನು ಸ್ವತಃ ಅನುಭವಿಸಿ, ತನ್ನ ಸಮುದಾಯದ ಹಕ್ಕುಗಳಿಗಾಗಿ, ಹೋರಾಡುತ್ತಿರುವ, ಶ್ರಮಿಸುತ್ತಿರುವ ದಿಟ್ಟ ಮಹಿಳೆ ಅಕೈ ಪದ್ಮಶಾಲಿ ಅವರ ಸಂವಾದವನ್ನು ಏರ್ಪಡಿಸಿತ್ತು.
ಸಂವಾದದಲ್ಲಿ ಅಕೈ, ಮುಂಬಯಿ ತಂಡದ ಶ್ರಮವನ್ನು ಮತ್ತು ನಾಟಕವನ್ನು ಶ್ಲಾಘಿಸುತ್ತ, ಈ ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯೋಗಗೊಳ್ಳಬೇಕು. ಹೆಚ್ಚು ಹೆಚ್ಚು ಪ್ರಯೋಗಗಾಳುಗುವ ಮೂಲಕ, ಲೈಂಗಿಕ ಅಲ್ಪ ಸಂಖ್ಯಾತರನ್ನು ಸಮಾಜ ನಡೆಸಿಕೊಳ್ಳುವ ಹೀನ ರೀತಿ, ಅವರ ನೋವು ಹಾಗೂ ಬಿಟ್ಟಕ್ಕುಗಳು ಹೆಚ್ಚು ಜನರಿಗೆ ತಲುಪುವಂತಾಬೇಕು ಎಂದರು.
ಈ ನಾಟಕದಲ್ಲಿ ಲೈಂಗಿಕ ಅಲ್ಪ ಸಂಖ್ಯಾತೆಯೊಬ್ಬಳ ಶವವನ್ನು ಅನ್ಯರು ನೋಡಬಾರದು ಅದು ಅವರಿಗೆ ಶ್ರೇಯಸ್ಸಲ್ಲ ಎನ್ನುವ ದೃಶ್ಯವೊಂದರ ಬಗ್ಗೆ ಪ್ರಸ್ತಾಪಿಸಿ, ಅದನ್ನು ಬಲವಾಗಿ ವಿರೋಧಿಸುತ್ತ ಅಂಥ ಹೀನ ಪದ್ಧತಿಗಳು ನಾಶವಾಗಿ, ಉಳಿದೆಲ್ಲರಂತೆ ಲೈಂಗಿಕ ಅಲ್ಪ ಸಂಖ್ಯಾತರಿಗೂ ಗೌರವಪೂರ್ವಕ ವಿದಾಯ ಸಲ್ಲಲೇಬೇಕು ಎಂದರು. ಚಕ್ಕಾ, ಕೋಜಾ, ಶಿಖಂಡಿ, ಒಂಬತ್ತು, ನಾಮರ್ದ ಎಂಬ ಪದಗಳು ನಮಗೆ ಬೇಡ. ನಮ್ಮನ್ನು ಹಾಗೆ ಕರೆಯಬೇಡಿ. ಜೋಗ್ತಾ, ಜೋಗಮ್ಮ, ಅಂತರ್ ಲಿಂಗಿ, ಲಿಂಗತ್ವ ಅಲ್ಪಸಂಖ್ಯಾತರು, ಲೈಂಗಿಕ ಅಲ್ಪಸಂಖ್ಯಾತರು, ಲಿಂಗತ್ವ ಬದಲಾಯಿಸಿ ಕೊಂಡವರು ಎಂದು ಬಳಸಿ. ನಮಗೆ ಕೆಟ್ಟ ಪದಗಳನ್ನ ಬಳಕೆ ಮಾಡಿ ಅವಮಾನಿಸಬೇಡಿ ಎಂದರು.
ಸಾ.ದಯಾ ನಾಟಕ ರಚನೆಯ ಹಾಗೂ ರಂಗಕ್ಕೆ ಬಂದ ಹಿನ್ನೆಲೆಯಲ್ಲಿ ಮಾತನಾಡಿದರು. ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಸಂಚಾಲಕತ್ವದಲ್ಲಿ ಸಂವಾದ ನಡೆಸಲ್ಪಟ್ಟಿತು.
ಈ ಸಂದರ್ಭ ವೇದಿಕೆಯಲ್ಲಿ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ ನಾಗರಾಜಮೂರ್ತಿ, ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ ಟಿ.ಆರ್., ಕವಿ ಗೋಪಾಲ ತ್ರಾಸಿ ಹಾಗೂ ಅಕಾಡೆಮಿಸದಸ್ಯ ಜಿ.ಪಿ ಓ ಚಂದ್ರು, ಜಗದೀಶ ಜಾಲ, ರವೀಂದ್ರನಾಥ್ ಸಿರಿವಾರ, ಮಮತಾ ಅರಿಸೀಕೆರೆ ಉಪಸ್ಥಿತರಿದ್ದರು.
ಮಧುಸೂದನ ಟಿ.ಆರ್ ಈ ನಾಟಕವನ್ನು ನಿರ್ವಹಿಸಲಿದ್ದು ಸಾ.ದಯಾ ಅವರದ್ದೇ ಬೆಳಕು ಸಂಯೋಜನೆ, ನಯನಾ ಸಾಲ್ಯಾನ್ ಮತ್ತು ಗೀತಾ ದೇವಾಡಿಗ ವಸ್ತ್ರ ವಿನ್ಯಾಸ, ಗಣೇಶ್ ಕುಮಾರ್ ಅವರ ಕಲೆ ಮತ್ತು ರಂಗ ಪರಿಕರದೊಂದಿಗೆ ದಿವಾಕರ್ ಕಟೀಲ್ ಅವರ ಸಂಗೀತ, ವಿದ್ದು ಉಚ್ಚಿಲ್ ಅವರ ರಂಗ ವಿನ್ಯಾಸ, ಪೂರ್ಣಿಮಾ ಮಧುಸೂದನ ಟಿ.ಆರ್ ಅವರ ರಂಗ ನಿರ್ವಹಣೆ, ರಾಮಾನುಗ್ರಹ ಕ್ಯಾಟರರ್ಸ್‍ನ ಸಹಕಾರ, ಶಶಿ ಕಿರಣ್, ಸುಷ್ಮಾ ಆಚಾರ್ಯ ಅವರ ಸಾಂಗತ್ಯದಲ್ಲಿ ನಾಟಕ ಪ್ರದರ್ಶನಗೊಂಡಿತು.
ಮಂಜುನಾಥ್ ಶೆಟ್ಟಿಗಾರ್ ಪ್ರಸಾಧನಗೈದಿದ್ದು, ಒಟ್ಟು 20 ಹಿರಿಕಿರಿಯ ಕಲಾವಿದರು, 32 ಭಿನ್ನಭಿನ್ನ ಪಾತ್ರಗಳನ್ನು ನಿರ್ವಹಿಸಿದರು.