ಉಡುಪಿ, ಅಕ್ಟೋಬರ್ 01: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆ ಉಡುಪಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ 155 ನೇ ಗಾಂಧಿ ಜಯಂತಿ ಕಾರ್ಯಕ್ರಮವು ಅಕ್ಟೋಬರ್ 2 ರಂದು ಬೆಳಗ್ಗೆ 8.30 ಕ್ಕೆ ನಗರದ ಅಜ್ಜರಕಾಡುವಿನ ಭುಜಂಗ ಶೆಟ್ಟಿ ಪಾರ್ಕಿನ ಗಾಂಧಿಕಟ್ಟೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಪೌರಾಯುಕ್ತ ರಾಯಪ್ಪ ಹಾಗೂ ಮತ್ತಿತರರು ಭಾಗವಹಿಸಲಿದ್ದು, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಪ್ರಸಾದ್ ರಾವ್ ಎಂ ಉಪನ್ಯಾಸ ನೀಡಲಿದ್ದಾರೆ.
ಅಂದು ಬೆಳಗ್ಗೆ 7 ಗಂಟೆಗೆ ಉಡುಪಿಯ ಹಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಬೆ. 7.30 ಕ್ಕೆ ಸರ್ವೀಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‍ನಿಂದ ಅಜ್ಜರಕಾಡಿನ ಪುರಭವನದ ವರೆಗೆ ಜಾಥಾ ಕಾರ್ಯಕ್ರಮ, ಬೆ. 8.30 ಕ್ಕೆ ಅಜ್ಜರಕಾಡು ಭುಜಂಗ ಶೆಟ್ಟಿ ಪಾರ್ಕ್‍ನ ಗಾಂಧಿ ಕಟ್ಟೆಯ ಬಳಿಯ ಗಾಂಧಿ ಪುಥ್ಥಳಿಗೆ ಪುಷ್ಪ ನಮನ ಹಾಗೂ ಬೆ. 9 ಕ್ಕೆ ಅಜ್ಜರಕಾಡಿನ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.