ಮಂಗಳೂರು, ಅ.1: ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಯುವ ಅನುಕೂಲತೆಗಳನ್ನು ಅರಸುತ್ತಿರಬೇಕು. ಅವಕಾಶ ಸಿಕ್ಕಿದಾಗ ಪೂರ್ಣವಾಗಿ ಅದರ ಲಾಭ ಪಡೆದು ತಂತ್ರಜ್ಞಾನದ ಪ್ರಭುತ್ವವನ್ನು ಸಾಧಿಸಬೇಕೆಂದು ಸಂತ ಜೋಸೆಫ್‍ ಇಂಜಿನಿಯರಿಂಗ್‍ ಕಾಲೇಜಿನ ಐಡಿಯಾ ಲ್ಯಾಬ್‍ನ ಮುಖ್ಯಸ್ಥ ಡಾ| ಪುರುಷೋತ್ತಮ  ಚಿಪ್ಪಾರ್ ಹೇಳಿದರು. 

ಅವರು ಮಂಗಳವಾರ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಂತ ಜೋಸೆಫ್‍ ಇಂಜಿನಿಯರಿಂಗ್‍ ಕಾಲೇಜು ಮತ್ತು ಡಯೆಟ್ ಮಂಗಳೂರು ಸಹಕಾರದೊಂದಿಗೆ ನಡೆದ ಜಿಲ್ಲಾ ಮಟ್ಟದ ಶಾಲೆಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ತಮ್ಮಕಾಲೇಜಿನ ವತಿಯಿಂದ ಇಂತಹ ಹಲವು ಚಟುವಟಿಕೆಗಳನ್ನು ನಡೆಸುತ್ತಿದ್ದು ಶಾಲೆಗಳಿಗೆ ಹೋಗಿ ಸಹ ಕಾರ್ಯಾಗಾರಗಳನ್ನು ನಡೆಸಲು ಸಿದ್ದರಿದ್ದೇವೆ. ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಅಧ್ಯಾಪಕರು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕರಾದ ಡಾ.ಕೆ.ವಿ.ರಾವ್‍ಮಾತನಾಡಿ ಪ್ರಾದೇಶಿಕ ವಿಜ್ಞಾನಕೇಂದ್ರ ತನ್ನ ದಶಮಾನೋತ್ಸವದ ಈ ಸಂದರ್ಭದಲ್ಲಿ ಹಲವು ವಿಜ್ಞಾನ ಸಂಬಂಧಿ ಚಟುವಟಿಕೆಗಳನ್ನು ಆಯೋಜಿಸಲು ಉದ್ದೇಶಿಸಿದ್ದು ಅವುಗಳ ಸಂಪೂರ್ಣ ಯಶಸ್ಸಿಗೆ ಸಹಕಾರಕೋರಿದರು. ಸಂಘ ಸಂಸ್ಥೆಗಳ, ಅಧ್ಯಾಪಕರ, ಸಾರ್ವಜನಿಕರ ಹಾಗೂ ಸರ್ಕಾರದ ಸಹಕಾರವನ್ನು ನೆನೆಯುತ್ತಾ ಭವಿಷ್ಯದಲ್ಲಿ ಸಹ  ಈ ಬೆಂಬಲ ದೊರೆಯಲಿ ಎಂದು ಆಶಿಸಿದರು.

ಕಾರ್ಯಾಗಾರದಲ್ಲಿ ಸಂತ ಜೋಸೆಫ್‍ ಕಾಲೇಜಿನ  ಪ್ರೊ. ರಾಧಾಕೃಷ್ಣ, ಡಾ. ವಿಜಯ್ ವಿ. ಎಸ್.,ಡಾ| ರವಿಕಾಂತ ಪ್ರಭು, ಡಾ| ಹರಿವಿನೋದ್‍ಎನ್, ಗ್ಲೆನ್ಸನ್‍ ಟೋನಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಜಿಲ್ಲಾಎ.ಟಿ.ಎಲ್ ಆರ್.ಟಿ.ಒ.ಸಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.

ಕೇಂದ್ರದ ಕ್ಯುರೇಟರ್ ಜಗನ್ನಾಥ್  ಕಾರ್ಯಕ್ರಮ ನಿರೂಪಿಸಿದರು, ವೈಜ್ಞಾನಿಕಾಧಿಕಾರಿ ವಿಘ್ನೇಶ್‍ ಸ್ವಾಗತಿಸಿದರು, ಇನ್ನೊವೇಶನ್ ಹಬ್, ಮೆಂಟರ್ ಹೇಮಂತ್‍ ವಂದಿಸಿದರು.