ಉಡುಪಿ : ಉಡುಪಿ ತಾಲೂಕಿನ ಕುದಿ ಗ್ರಾಮದ ಜನತೆಗೆ ಇಂದು ಬೆಳಗ್ಗೆ ಇದ್ದಕ್ಕಿದಂತೆ ತೀವ್ರ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ತೀವ್ರ ಆತಂಕದಲ್ಲಿದ್ದರು, ಗ್ರಾಮದಲ್ಲಿದ್ದ ಎ.ಜಿ.ಎಸ್. ಎಲ್‍ಪಿಜಿ ಇಂಡಸ್ಟ್ರಿಯಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದಾಗಿ ಈ ಘಟನೆ ಸಂಭವಿಸಿತ್ತು.  ಇಂದು ಬೆಳಗ್ಗೆ 8.50 ಕ್ಕೆ ಕುದಿ ಗ್ರಾಮದಲ್ಲಿರುವ ಎ.ಜಿ.ಎಸ್ ಎಲ್‍ಪಿಜಿ ಇಂಡಸ್ಟ್ರಿಯಲ್ಲಿ ಅನಿಲ ಸೋರಿಕೆ ಕಂಡು ಬಂದಿದ್ದು, ತಕ್ಷಣವೇ ಅಲ್ಲಿನ ಸಿಬ್ಬಂದಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಉಚಿತ ದೂರವಾಣಿ ಸಂಖ್ಯೆ 1077 ಗೆ ಘಟನೆ ಬಗ್ಗೆ 8.53 ಮಾಹಿತಿ ನೀಡಿದರು. ಕೂಡಲೇ ಪ್ಲಾಂಟ್‍ನಲ್ಲಿನ ಅಪಾಯದ ಸೈರನ್ ಮೊಳಗಿಸಿ, 2 ನಿಮಿಷದೊಳಗೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿಗಳು ಪ್ಲಾಂಟ್‍ನ ಅಸೆಂಬ್ಲಿ ಪಾಯಿಂಟ್‍ನಲ್ಲಿ ಸೇರಿ, ಸ್ಪೀಕರ್ ಮೂಲಕ ಮೂಲಕ ಘಟನೆ ಬಗ್ಗೆ ಸ್ಥಳೀಯ ಸಾರ್ವಜನಿಕರಿಗೆ ಮಾಹಿತಿ ನೀಡಿದರು.  ಬೆಳಗ್ಗೆ 9.17 ರ ವೇಳೆಗೆ ಉಡುಪಿಯಿಂದ ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಆಗಮಿಸಿ, ಅಗ್ನಿಶಾಮಕದ ವಾಹನದಿಂದ ಒಂದೆಡೆ ನೀರು ಸಿಂಪಡಿಸಿದರೆ ಎ.ಜಿ.ಎಸ್ ಸಿಬ್ಬಂದಿಗಳು ತಮ್ಮ  ಪ್ಲಾಂಟ್‍ನ  ಸುರಕ್ಷತೆಗೆ ನಿರ್ಮಿಸಿರುವ ಟ್ಯಾಂಕ್‍ನಿಂದ ನೀರು ಸಿಂಪಡಿಸುವ ಮೂಲಕ ಪ್ಲಾಂಟಿನ ತಾಪಮಾನವನ್ನು ಕಡಿಮೆಗೊಳಿಸಿ, ಅನಿಲ ಸೋರುವಿಕೆಯನ್ನು ನಿಯಂತ್ರಣಕ್ಕೆ ತರುವ ಕಾರ್ಯದಲ್ಲಿ ತೊಡಗಿ, 9.50 ರ ವೇಳೆಗೆ ಸೋರಿಕೆಯನ್ನು ನಿಯಂತ್ರಣಕ್ಕೆ ತಂದರು.

   ಬೆಳಗ್ಗೆ 9.20 ರ ವೇಳೆಗೆ 3 ಆಂಬುಲೈನ್ಸ್‍ಗಳು ಸ್ಥಳಕ್ಕೆ ಆಗಮಿಸಿದ್ದು, ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದವರು ಮತ್ತು ಅಸ್ವಸ್ಥರಾದವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಭಾಗಿಯಾದರೆ, ಆ ಕ್ಷಣದಲ್ಲಿ ಆಗಮಿಸಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ  ಅವಶ್ಯವಿದ್ದವರನ್ನು ಉನ್ನತ ಮಟ್ಟದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು.  

     ಪ್ರಕರಣದ ಮಾಹಿತಿ ತಿಳಿದ ತಕ್ಷಣದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳದ ಸಮೀಪಕ್ಕೆ ಜನರು ಹೋಗದಂತೆ ಪ್ರತಿಬಂಧಿಸಿ ರಸ್ತೆಗಳ ಸಂಚಾರವನ್ನು ನಿಬರ್ಂಧಿಸಿದರು.

    ಆಪದ್ ಮಿತ್ರ ಸಿಬ್ಬಂದಿ, ಗೃಹ ರಕ್ಷಕ ದಳದವರು, ಸ್ಥಳೀಯ ಸ್ವಯಂ ಸೇವಕರು ಸಿಬ್ಬಂದಿ ಗ್ರಾಮದ  ಸಾರ್ವಜನಿಕರನ್ನು  ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ತೀವ್ರ ತೊಂದರೆಗಳಾದವರನ್ನು ಆಂಬುಲೆನ್ಸ್‍ಗಳಿಗೆ ಶಿಫ್ಟ್ ಮಾಡಿದರು. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿ ಅನುವು ಮಾಡಿಕೊಟ್ಟರು. ಘಟನಾ ಸ್ಥಳದ ಇನ್ಸಿಡೆಂಟ್ ಅಬ್ಸರ್‍ವರ್‍ಗಳು ಕ್ಷಣಕ್ಷಣದ ಮಾಹಿತಿಯನ್ನು ಪಡೆಯುವುದರೊಂದಿಗೆ ರಕ್ಷಣಾ ಕಾರ್ಯದ ಮುನ್ಸೂಚನೆಗಳನ್ನು ನೀಡುತ್ತಿದ್ದರು.       ಅಗ್ನಿಶಾಮಕ ಸಿಬ್ಬಂದಿ ಹಾಗೂ ಏಜಿಸ್ ಸಂಸ್ಥೆಯ ಸಿಬ್ಬಂದಿಗಳು ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ ಬಳಿಕ ಪ್ಲಾಂಟ್ ಸುರಕ್ಷಿತವಾಗಿರುವ ಕುರಿತಂತೆ 10.30 ಕ್ಕೆ ತಮ್ಮ ವರದಿಯನ್ನು ನೀಡಿದರು.  ಗ್ಯಾಸ್ ಪ್ಲಾಂಟ್‍ನ ಸುತ್ತಮುತ್ತಲಿನ ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಗಳಿಗೆ ರವಾನಿಸಿರುವ ಬಗ್ಗೆ ಹಾಗೂ ತೊಂದರೆಗೊಳಗಾದ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ರವಾನಿಸಿರುವ ಬಗ್ಗೆ ಮಾಹಿತಿ ಪಡೆದ  ನಂತರ ಅಣಕು ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು.

       ಇದು ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆಯಂತೆ, ಜಿಲ್ಲೆಯಲ್ಲಿ ನಡೆಸಿದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ  ಅಣಕು ಪ್ರದರ್ಶನವಾಗಿತ್ತು.

       ನಂತರ ಈ ಕಾರ್ಯಾಚರಣೆಯ ಸಾಧಕ ಭಾದಕಗಳ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲೆಯಲ್ಲಿ ಸಂಭವಿಸಬಹುದಾದ ಯಾವುದೇ ಬಗೆಯ ವಿಪತ್ತುಗಳಿಗೆ ತಕ್ಷಣ ಸ್ಪಂದಿಸಿ ಅಗತ್ಯ ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಹೇಳಿದರು.     ಯಾವುದೇ ವಿಪತ್ತುಗಳು ಸಂಭವಿಸಿದಾಗ ಜಿಲ್ಲಾಡಳಿತ ಉಚಿತ ಟೋಲ್ ಫ್ರೀ.ಸಂ. 1077 ಗೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು   ತಕ್ಷಣದಲ್ಲೇ ಘಟನೆ ಸಂಭವಿಸಿದ ಸ್ಥಳಕ್ಕೆ ಹಾಜರಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಜೀವಹಾನಿಯಾಗದಂತೆ ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

      ಇಂದು ನಡೆದ ಅಣಕು ಕಾರ್ಯಾಚರಣೆಯ ಮೂಲಕ ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೈಜ ಚಿತ್ರಣ ದೊರೆತಿದೆ. ಅಣಕು ಕಾರ್ಯಚರಣೆ ಆದರೂ ಸಹ ಎಲ್ಲಾ ಸಿಬ್ಬಂದಿಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಸ್ಪಂದಿಸಿ, ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯಾಡಳಿತಗಳು ಮತ್ತು ಸಾರ್ವಜನಿಕರು ಸಹ  ಅಗತ್ಯ ಸಹಕಾರ ನೀಡಿದ್ದು, ಜಿಲ್ಲೆಯಲ್ಲಿ  ವಿಪತ್ತು ನಿರ್ವಹಣಾ ಕಾರ್ಯದಲ್ಲಿ ತೊಡಗಿಕೊಳ್ಳಲು ಆಪದ ಮಿತ್ರ ಸ್ವಯಂ ಸೇವಕರ ತಂಡ ಸಹ ಸಿದ್ಧವಾಗಿದೆ ಎಂದರು.    

       ಕಾರ್ಯಕ್ರಮದಲ್ಲಿ ಇನ್ಸಿಡೆಂಟ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ನ್. ಮಾತನಾಡಿ, ಈ  ಅನಿಲ ಸೋರಿಕೆ ದುರಂತದ ಕಾರ್ಯವು ಅಣುಕು ಪ್ರದರ್ಶನವಾಗಿದ್ದರೂ ಸ್ಥಳೀಯ ಜನರು, ಇಲ್ಲಿನ ಸ್ವಯಂ ಸೇವಕರು, ಜಿಲ್ಲಾಡಳಿತದ ಸಿಬ್ಬಂದಿಗಳು ದುರಂತ ಸಂಭವಿಸಿದೆ ಎಂಬ ರೀತಿಯಲ್ಲಿ ತಮ್ಮ ತಮ್ಮ ಕರ್ತವ್ಯಗಳನ್ನು ಪಾಲಿಸಿ ಎಂದರು.       ದುರಂತ ಸಂಭವಿಸಿದ ಸ್ಥಳದಲ್ಲಿನ ನೈಸರ್ಗಿಕ ಪರಿಸ್ಥಿತಿಯನ್ನು ಅರಿತು ಕಾರ್ಯಾಚರಣೆ ಮಾಡಿದಲ್ಲಿ, ವಿಕೋಪವನ್ನು ಹತೋಟಿಗೆ ತರಲು ಸಾಧ್ಯ . ಅಲ್ಲಿನ ಗಾಳಿ ಬೀಸುವಿಕೆಯ ದಿಕ್ಕು, ಘಟನಾ ಸ್ಥಳಕ್ಕೆ ಹೋಗುವ ರಸ್ತೆ ಮಾರ್ಗಗಳು, ಸ್ಥಳೀಯ ಜನರ ಸುತ್ತಮುತ್ತ ಮನೆಗಳ ಗುರುತಿಸುವಿಕೆ ಸೇರಿದಂತೆ ಮತ್ತಿತರ ಮಾಹಿತಿಗಳಿಂದ ದುರಂತದ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.     ಕುದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಶೆಟ್ಟಿ,ಉಪಾಧ್ಯಕ್ಷ ಸದಾನಂದ ಪ್ರಭು ಹಾಗೂ ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕ, ಆರೋಗ್ಯ, ಕೈಗಾರಿಕೆ, ಫ್ಯಾಕ್ಟರ್ ಮತ್ತು ಬಾಯ್ಲರ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಎಜಿಸ್ ಎಲ್‍ಪಿಜಿ ಇಂಡಸ್ಟ್ರಿಯ ಮೆನೇಜರ್ ರಂಗನಾಥ್ ಹಾಗೂ ಸಿಬ್ಬಂದಿಗಳು, ಆಪದ ಮಿತ್ರ ಸ್ವಯಂ ಸೇವಕರು ಉಪಸ್ಥಿತರಿದ್ದರು.