ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಲಕ್ಷ ದೀಪೋತ್ಸವ ನಡೆಯಲಿದ್ದು, ಲಕ್ಷಕ್ಕೂ ಮಿಕ್ಕಿ ಭಕ್ತರು ಬರುವ ನಿರೀಕ್ಷೆ ಇದೆ.
ಭಕ್ತರಿಂದ ವೈವಿಧ್ಯಮಯ ಸೇವೆ: ರೈತರು ಶ್ರದ್ಧಾ-ಭಕ್ತಿಯಿಂದ ಹೂವು, ಹಣ್ಣುಹಂಪಲು, ಅಕ್ಕಿ-ತರಕಾರಿ, ಬೇಳೆಗಳು ಹಾಗೂ ದವಸಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಅಲಂಕಾರ ಸೇವೆ: ಬೆಂಗಳೂರು ಮಾರುಕಟ್ಟೆ ಹೂವಿನ ವ್ಯಾಪಾರಸ್ಥರ ಸಂಘದ ಶಿವಕುಮಾರ್ ನೇತೃತ್ವದಲ್ಲಿ ಡೆಕೋರೇಟರ್ಸ್ ಸಹಯೋಗದಲ್ಲಿ ವಿವಿಧ ಹೂವುಗಳು, ಹಣ್ಣುಗಳು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ, ಕಾರ್ಯಾಲಯಗಳನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಇದಕ್ಕಾಗಿ ತಲಾ 300 ಕೆ.ಜಿ.ಯಷ್ಟು ಅನಾನಸು, ಸೇಬು, ದ್ರಾಕ್ಷಿ, ಕಬ್ಬು, ತೆಂಗಿನಕಾಯಿ, ಕಲ್ಲಂಗಡಿ ಬಳಸಲಾಗಿದೆ.
ಲಿಲಿಯಂ, ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ ಎಂದು ಶಿವಕುಮಾರ್ ಪ್ರಜಾವಾಣಿಗೆ ತಿಳಿಸಿದ್ದಾರೆ.
ಸುಮಾರು ಮುನ್ನೂರು ಜನರು ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು, ಶನಿವಾರ ಲಕ್ಷದೀಪೋತ್ಸವಕ್ಕೆ ತಮ್ಮ ಉಚಿತ ಸೇವೆ ಎಂದು ಶಿವಕುಮಾರ್ ತಿಳಿಸಿದ್ದು ಅಂದಾಜು ಹತ್ತು ಲಕ್ಷ ರೂ. ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ.
ಸಮವಸರಣ ಪೂಜೆ: ಭಾನುವಾರ ಸಂಜೆ ಗಂಟೆ 6.30 ರಿಂದ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿಯ ಶ್ರಾವಕರು, ಶ್ರಾವಕಿಯರು ಭಾಗವಹಿಸುವರು.
ಬೆಂಗಳೂರಿನ ನವೀನ್ ಜಾಂಬಳೆ ತಂಡದ ಕಲಾವಿದರಿಂದ ಜಿನಗಾನೋತ್ಸವ ನಡೆಯಲಿದೆ.