ಉಜಿರೆ: ದುಶ್ಚಟಕ್ಕೆ ಅಥವಾ ವ್ಯಸನಕ್ಕೆ ಬಲಿಯಾಗುವುದು ಅಥವಾ ಅಭ್ಯಾಸ ಪ್ರಾರಂಭ ಮಾಡುವುದು ಸುಲಭ. ಅದನ್ನು ಬಿಡುವುದು ಅಷ್ಟೇ ಕಷ್ಟ. ಕೆಟ್ಟ ವಸ್ತುಗಳಿಗೆ ಆಕರ್ಷಣೆ ಜಾಸ್ತಿ. ಆಕರ್ಷಣೆ ಬಂದಾಗ 10 ನಿಮಿಷಗಳ ಕಾಲ ವಿರಮಿಸಿದ್ದಲ್ಲಿ ಒಳ್ಳೆಯ ವಿಚಾರ ಆಲೋಚನೆ ಮಾಡಲು ಸಹಾಯವಾಗುತ್ತದೆ. ಶಿಬಿರದಲ್ಲಿ ಹೇಳಿಕೊಟ್ಟ ಧ್ಯಾನ, ವ್ಯಾಯಾಮ,ಯೋಗ, ಸಂಗೀತ, ಭಜನೆ, ಆಧ್ಯಾತ್ಮಿಕ ಚಿಂತನೆಗಳು ನಿಮ್ಮ ಮನಸ್ಸನ್ನು ಪರಿವರ್ತನೆ ಮಾಡುತ್ತದೆ. ನೀವು ಮಾಡಿದ ಎಲ್ಲಾ ದೋಷಗಳಿಗೆ ಮದ್ಯವರ್ಜನ ಶಿಬಿರಗಳಲ್ಲಿ ನಿಮಗಾಗುವ ಪರಿವರ್ತನೆಯೇ ಶಾಶ್ವತ ಪರಿಹಾರವಾಗಿದೆ”ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಉಜಿರೆ ಲಾೈಲದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ 259ನೇ ವಿಶೇಷ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಕೌನ್ಸಿಲಿಂಗ್ ಅಥವಾ ನವಜೀವನ ಸಮಿತಿ ಸಭೆಗೆ ಭಾಗವಹಿಸುವುದು ನಿಜವಾಗಿಯೂ ಬದುಕು ಕಟ್ಟುವ ಕೆಲಸವಾಗಿದೆ. ಮನಃಪರಿವರ್ತನೆ ಆದಮೇಲೆ ಅದರ ನಿರಂತರತೆ ಕಾಯ್ದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಶಿಬಿರದಿಂದ ಹೋದಮೇಲೆ ಹಳೆಯ ಸ್ನೇಹಿತರಿಂದ, ಅಹಿತಕರ ಸನ್ನಿವೇಶಗಳಲ್ಲಿ ಮೋಸ ಹೋಗಬಾರದು. ದುಶ್ಚಟ ದೂರ ಮಾಡಿದಾಗ ಮಾತ್ರ ಸಂಸಾರದಲ್ಲಿ ಹಾಗೂ ಸಮಾಜದಲ್ಲಿ ಒಬ್ಬ ವ್ಯಕ್ತಿ ಗೌರವಯುತವಾಗಿ ಬದುಕಲು ಸಾಧ್ಯ” ಎಂದು ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ 60 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳು, ಜನಜಾಗೃತಿ ವೇದಿಕೆ ಕಾರ್ಯಕ್ರಮದ ಮಾರ್ಗದರ್ಶಕರು ಪೂಜ್ಯರ ಸಹೋದರರಾದ ಡಿ. ಸುರೇಂದ್ರ ಕುಮಾರ್, ಪೂಜ್ಯರ ಆಪ್ತ ಕಾರ್ಯದರ್ಶಿಗಳಾದ ವೀರು ಶೆಟ್ಟಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ.ಪಾೈಸ್, ಆಡಳಿತ ಯೋಜನಾಧಿಕಾರಿಗಳಾದ ಮಾಧವ ಗೌಡ, ಶಿಬಿರಾಧಿಕಾರಿಯವರಾದ ವಿದ್ಯಾಧರ್, ರಮೇಶ್, ದಿವಾಕರ ಪೂಜಾರಿ ಮತ್ತು ಆರೋಗ್ಯ ಸಹಾಯಕರಾದ ರಂಜಿತಾ, ತುಷಾರ, ಫಿಲೋಮಿನಾ ಡಿಸೋಜಾ, ಆಪ್ತಸಮಾಲೋಚಕರಾದ ಜಿ ಆರ್ ಮಧು ಮತ್ತು ಜಾಗೃತಿ ಸೌಧದ ಪ್ರಬಂಧಕರಾದ ಕಿಶೋರ್ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ಡಿಸೆಂಬರ್ 01 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.