ಮಂಗಳೂರು, ಸೆ. 02: ಬಿಜೆಪಿ ಕಾರ್ಪೊರೇಟರ್‌ಗಳು ಮತ್ತು ಶಾಸಕರು ಲಸಿಕೆ ಕಾರ್ಯಕ್ರಮವನ್ನು ಬಿಜೆಪಿ ಹೈಜಾಕ್ ಮಾಡುತ್ತಿದ್ದು, ಪ್ರತಿಪಕ್ಷಗಳನ್ನು ವಂಚಿಸುತ್ತಿರುವುದು ಖಂಡನೀಯ ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಪ್ರತಿಪಕ್ಷಗಳ ಕಾರ್ಪೊರೇಟರ್‌ಗಳು ಸಂಘಟಿಸುವ ಲಸಿಕೆ ಕಾರ್ಯಕ್ರಮವನ್ನು ಅಂತಿಮ ಕ್ಷಣದಲ್ಲಿ ರದ್ದು ಮಾಡುವ ಬಿಜೆಪಿ ಲಸಿಕೆಯನ್ನು ಸರಾಕಾರಿ ಆಶ್ವಾಸನೆ ಎಂದುಕೊಂಡಿದೆಯೆ? ಲಸಿಕೆ ಕಾರ್ಯಕ್ರಮಕ್ಕೆ ‌ಪ್ರಧಾನಿ ಮೋದಿ ಹೆಸರಿನ ಫೋಟೋ, ಸರ್ಟಿಫಿಕೇಟ್ ಯಾಕೆ? ಇದು ರೋಗ ತಡೆಯುವ ವಿಧಾನವೇ?  ಬಿಜೆಪಿ ಪಕ್ಷದ ಪ್ರಚಾರವೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಉಚಿತ ಲಸಿಕೆ ಕಾರ್ಯಕ್ರಮವನ್ನು ಸರಕಾರಿ ಆರೋಗ್ಯ ಕೇಂದ್ರಗಳು, ಪಂಚಾಯತಿಗಳಲ್ಲಿ ಮಾಡಬೇಕೇ ಹೊರತು, ಬಿಜೆಪಿ ನಾಯಕರ ಮನೆಯೆದುರು ಟೆಂಟ್ ಹಾಕಿ ಅಲ್ಲ. ಕಾರ್ಮಿಕ ಸುಂಕದ ಮೂಲಕ ಒಟ್ಟು ಮಾಡಿದ ಹಣ ರಾಜ್ಯ ಸರಕಾರದ ಬಳಿ 8,000 ಕೋಟಿ ಇದ್ದು, ಕಾರ್ಮಿಕ ಕಲ್ಯಾಣ ನಿಧಿಯ ಇದನ್ನು ಕಿಟ್ ಹಂಚಲು ಬಳಸುತ್ತಿದ್ದಾರೆ. ಕಾರ್ಮಿಕರಿಗೆ ಕೊಡುವ ಈ ಕಿಟ್ ಬಂಟ್ವಾಳದಲ್ಲಿ ಸಂದೇಶ ಸ್ಟೋರ್ಸ್ ಎಂಬ ಒಂದು ಅಂಗಡಿಯಲ್ಲಿ ಮಾರಾಟ ಆಗುತ್ತಿರುವುದಾಗಿ ಹರೀಶ್ ಕುಮಾರ್ ಆಪಾದಿಸಿದರು.

ಜನಪ್ರತಿನಿಧಿಗಳನ್ನು ಪಕ್ಷ ನೋಡಿ ಕಡೆಗಣಿಸಿದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡುತ್ತದೆ ಎಂದು ಸಹ ಹರೀಶ್ ಕುಮಾರ್ ಹೇಳಿದರು.

ಬೆಳ್ತಂಗಡಿ ತಾಲೂಕಿನ ಎಲ್ಲ ಪಂಚಾಯತಿಗಳಲ್ಲಿ ಕಿಟ್‌ಗಳನ್ನು ಪಕ್ಷ ನೋಡದೆ ಹಂಚಲಾಗಿದೆ. ಬಂಟ್ವಾಳದಲ್ಲಿ ಯಾಕೆ ರಾಜಕೀಯ? ಅಧಿಕಾರಿಗಳು ಅಸಹಾಯಕರು ಎನ್ನುವುದೇಕೆ? ಅವರು ಜನರ ಹಣದಿಂದ ಸಂಬಳ ತಿನ್ನುವುದಿಲ್ಲವೆ ಎಂದು ಹರೀಶ್ ಕುಮಾರ್ ಪ್ರಶ್ನೆ ಮಾಡಿದರು.

ಬಿಜೆಪಿಯು ಲಸಿಕೆ ಮತ್ತು ಕಿಟ್  ವಿತರಣೆಯಲ್ಲಿ ಕೆಟ್ಟ ರಾಜಕೀಯ ‌ಬಿಡಲಿ. ರಾಜೀವ್ ಗಾಂಧಿ ನೀಡಿದ ಪಂಚಾಯತ್ ರಾಜ್ ವ್ಯವಸ್ಥೆಯ ವಿಕೇಂದ್ರೀಕರಣ ಬಿಜೆಪಿ ದುರ್ಬಳಕೆಗೆ ಆಗಬಾರದು ಎಂದು ಹರೀಶ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಹುಲ್ ಹಮೀದ್, ಕುಂದರ್, ಟಿ. ಕೆ. ಸುಧೀರ್, ಲಾರೆನ್ಸ್‌ ಡಿಸೋಜಾ, ಮಹಿಳಾ ಘಟಕದ ಅಪ್ಪಿ, ಮಿಸ್ಕಿತ್ ಮೊದಲಾದವರು ಉಪಸ್ಥಿತರಿದ್ದರು.