ಎಣ್ಣೆಹೊಳೆ: ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾದ ಕ್ರಿಡಾಕೂಟವನ್ನು ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸದಾನಂದ ಸಾಲಿಯಾನ್ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಹಳೆಯ ನೆನಪುಗಳು ಸ್ಮರಣೆಯಾಗಿವೆ. ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರ, ಅದು ನಮ್ಮ ಶಾಲೆಯ ಅಭಿಮಾನದ ಸಂಕೇತ. ಬೆಳ್ಳಿ ಹಬ್ಬದ ಕಾರ್ಯಕ್ರಮವು ಶಾಲೆಗೆ ವಿಶೇಷ ಮಹತ್ವ ಹೊಂದಿದೆ” ಎಂದು ಹೇಳಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೀರ್ ಶೆಟ್ಟಿ ಮಾತನಾಡಿ, “ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುತ್ತಿವೆ” ಎಂದು ತಿಳಿಸಿದ್ದಾರೆ.

ಸಭೆಯನ್ನುದ್ದೇಶಿಸಿ ಮುಖ್ಯೋಪಾಧ್ಯಾಯ ರಾಮದಾಸ್ ನಾಯಕ್ ಮಾತನಾಡಿ, “ಬೆಳ್ಳಿ ಹಬ್ಬದ ಅಂಗವಾಗಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಸೋಲು–ಗೆಲುವು ಸಾಮಾನ್ಯ. ಆದರೆ ಕ್ರೀಡೆ ವ್ಯಕ್ತಿತ್ವವನ್ನು ಬೆಳೆಸುವ ವೇದಿಕೆ” ಎಂದರು.

ದೈಹಿಕ ಶಿಕ್ಷಣ ಶಿಕ್ಷಕಿ ಆಶಾ ಮಾತನಾಡಿ, “ಕ್ರೀಡೆ ಜೀವನದಲ್ಲಿ ಸೋಲನ್ನು ಗೆಲುವಿನಷ್ಟೇ ಸಮಾನವಾಗಿ ಸ್ವೀಕರಿಸಲು ಸಹಾಯ ಮಾಡುತ್ತದೆ” ಎಂದು ಅಭಿಪ್ರಾಯಪಟ್ಟರು.

ಹಳೆ ವಿದ್ಯಾರ್ಥಿ ಸಂಘದ ರಾಜೇಶ್ ಶೆಟ್ಟಿ, ಶಿಕ್ಷಕರಾದ ಗಿರೀಶ್, ಗಣೇಶ್, ರಾಜರಾಮ ಶೆಟ್ಟಿ ಹಾಗೂ ಸ್ಥಳೀಯರಾದ ಸಂತೋಷ್ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಹಳೆ ವಿದ್ಯಾರ್ಥಿ ಶರತ್ ಶೆಟ್ಟಿ ಪ್ರಾರ್ಥನೆ ನಡೆಸಿದರು. ಸುಕೇಶ್ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.